ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೆಲುವಿನ ನಗೆ ಬೀರುತ್ತಾರಾ ಬಸವರಾಜ ಗುರಿಕಾರ?

ಬಸವರಾಜ ಗುರಿಕಾರ ಎಂಬ ಹೆಸರು ಶಿಕ್ಷಕ ಕ್ಷೇತ್ರಕ್ಕೆ ಚಿರಪರಿಚಿತ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರಾಗಿ ಅವರು ಮಾಡಿದ ಕೆಲಸಗಳು ಅಸಂಖ್ಯ. ಅಧಿಕಾರವಿಲ್ಲದಿದ್ದರೂ ತಮ್ಮದೇ ಶೈಲಿಯ ಛಾಪು ಮೂಡಿಸಿರುವ ಗುರಿಕಾರ, ಶಿಕ್ಷಕರಿಗೆ ಅನ್ಯಾಯವಾದಾಗ ಧ್ವನಿ ಎತ್ತುವ ವ್ಯಕ್ತಿಯಾಗಿದ್ದಾರೆ. ರಾಜಕೀಯ ಸ್ಥಾನಮಾನ ಇಲ್ಲದ ಕಾಲದಲ್ಲೂ ಗುರಿಕಾರ ಶಿಕ್ಷಕರಿಗಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದವರು. ಸ್ವತಃ ಶಿಕ್ಷಕರಾಗಿ ಕೆಲಸ ಮಾಡಿ ಶಿಕ್ಷಕರ ಜ್ವಲಂತ ಸಮಸ್ಯೆಗಳನ್ನು ಅರಿತವರು ಹಾಗೂ ಅನುಭವಿಸಿದವರು. ಹೀಗಾಗಿಯೇ ಸಾಂವಿಧಾನಿಕ ಹುದ್ದೆ ಅಲಂಕರಿಸಿ ಶಿಕ್ಷಕರ ಸೇವೆ ಮಾಡಬೇಕು ಎಂದು ಛಲ ತೊಟ್ಟು ಇದೀಗ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಇವರಿಗೆ ಇನ್ನಷ್ಟು ಶಕ್ತಿ ತುಂಬಿದ್ದು, ಕಾಂಗ್ರೆಸ್ ಪಕ್ಷ. ಚುನಾವಣೆ ಘೋಷಣೆಗೂ ಮೂರು ತಿಂಗಳ ಹಿಂದೆಯೇ ಕಾಂಗ್ರೆಸ್ ಪಕ್ಷ ಬಸವರಾಜ ಗುರಿಕಾರ ಅವರ ಕಾರ್ಯ ವೈಖರಿ ನೋಡಿ ಅವರಿಗೆ ಟಿಕೆಟ್ ಘೋಷಣೆ ಮಾಡಿತ್ತು. ಕೊಟ್ಟ ಮಾತಿನಂತೆ ಬಸವರಾಜ ಹೊರಟ್ಟಿ ವಿರುದ್ಧ ಬಸವರಾಜ ಗುರಿಕಾರ ಅವರನ್ನು ಕಣಕ್ಕಿಳಿಸುವ ಮೂಲಕ ಚುನಾವಣಾ ರಣತಂತ್ರ ರೂಪಿಸಿದೆ. ಒಂದು ಹಂತಕ್ಕೆ ಇದು ಇಬ್ಬರೂ ಬಸವರಾಜರ ಮಧ್ಯದ ಯುದ್ಧವೇ ಎಂದು ಹೇಳಲಾಗುತ್ತಿದೆ.

ಉತ್ತರ ಕನ್ನಡ, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳನ್ನೊಳಗೊಂಡು ನಡೆಯುತ್ತಿರುವ ಈ ವಿಧಾನ ಪರಿಷತ್ ಚುನಾವಣೆ ಬಸವರಾಜ ಗುರಿಕಾರ ಅವರ ಸ್ಪರ್ಧೆಯಿಂದ ಮತ್ತಷ್ಟು ರಂಗೇರಿದೆ. 1981ರಲ್ಲಿ ಹೋರಾಟದ ಮುಖಾಂತರ 482 ಶಿಕ್ಷಕರುಗಳಿಗೆ ಶಿಕ್ಷಕರ ನೇಮಕಾತಿ ಆದೇಶ ಮಾಡಿಸಿ, ವಯೋಮಿತಿ ಆಧಾರದ ಮೇಲೆ ಶಿಕ್ಷಕರ ನೇಮಕಾತಿಗೆ ಶ್ರಮಿಸುವುದರ ಮುಖಾಂತರ ಸಂಘಟನೆ, ಹೋರಾಟದ ಜೀವನ ಆರಂಭಿಸಿದ ಗುರಿಕಾರ, ತಮ್ಮ ಹೋರಾಟದ ಬದುಕಿನುದ್ದಕ್ಕೂ ಶಿಕ್ಷಕರ ಏಳ್ಗೆಗಾಗಿ ಶ್ರಮಿಸಿದವರು. ಪ್ರಸಕ್ತ ವರ್ಷ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಇವರು, ತಾವು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಆದಿದ್ದೇ ಆದಲ್ಲಿ ಏನೆಲ್ಲ ಮಾಡಬೇಕು ಎಂಬ ಕನಸು ಹೊತ್ತಿದ್ದಾರೆ ಎಂಬುದನ್ನು ಅವರಿಂದಲೇ ಕೇಳೋಣ ಬನ್ನಿ

ಸತತ ಏಳು ಬಾರಿ ಗೆದ್ದು ಬೀಗಿರುವ ಬಸವರಾಜ ಹೊರಟ್ಟಿ ವಿರುದ್ಧ ತೊಡೆ ತಟ್ಟಿರುವ ಗುರಿಕಾರ ಅವರಿಗೆ ಅನೇಕ ಶಿಕ್ಷಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಪ್ರತಿ ಬಾರಿಯೂ ಹೊರಟ್ಟಿ ಅವರಿಗೆ ಬಿಜೆಪಿಯೇ ಪ್ರತಿಸ್ಪರ್ಧಿ ಆಗಿರುತ್ತಿತ್ತು. ಆದರೆ, ಇದೀಗ ಅವರೇ ಬಿಜೆಪಿಗೆ ಸೇರ್ಪಡೆಯಾಗಿರುವುದು ನಮಗೆ ಲಾಭವಾಗಿದೆ ಎನ್ನುತ್ತಾರೆ ಗುರಿಕಾರ. ಏಕೆಂದರೆ ಈ ಬಾರಿ ಶಿಕ್ಷಕರು ಯಾರಿಗೆ ಮಣೆ ಹಾಕಬೇಕು ಎಂಬುದನ್ನು ನಿರ್ಧಾರ ಮಾಡಿಕೊಂಡಿದ್ದಾರೆ. ಹೀಗಾಗಿ ಪ್ರಸಕ್ತ ವರ್ಷದ ಚುನಾವಣೆಯಲ್ಲಿ ಶಿಕ್ಷಕ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ, ಉಪನ್ಯಾಸಕರ ಸಂಘ ಕೂಡ ಗುರಿಕಾರ ಅವರಿಗೆ ಬೆಂಬಲ ಸೂಚಿಸಿದೆ.

ಬಸವರಾಜ ಗುರಿಕಾರ ಅವರು ಈಗಾಗಲೇ ತಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, 24 ಭರವಸೆಗಳನ್ನು ಅವರು ನೀಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಶಿಕ್ಷಕರ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ. ಆ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವುದೇ ನನ್ನ ಗುರಿಯಾಗಿದೆ. ಈಗಾಗಲೇ ನಾಲ್ಕೂ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ಹೋದ ಕಡೆಗಳಲ್ಲೆಲ್ಲ ಉತ್ತಮ ಸ್ಪಂದನೆ ದೊರೆಯುತ್ತಿದೆ. ಶಿಕ್ಷಕರು ಈ ಬಾರಿ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವನ್ನು ಬಸವರಾಜ ಗುರಿಕಾರ ವ್ಯಕ್ತಪಡಿಸಿದ್ದಾರೆ.

Edited By : Shivu K
PublicNext

PublicNext

03/06/2022 07:02 pm

Cinque Terre

178.01 K

Cinque Terre

13

ಸಂಬಂಧಿತ ಸುದ್ದಿ