ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದ ಆರೋಪಿ ಅಭ್ಯರ್ಥಿ ರಕ್ಷಣೆಗೆ ಮುಂದಾಗಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅವರು ‘ಭ್ರಷ್ಟಾಚಾರಕ್ಕೇ ವಿಶ್ವಮಾನವ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಅಶ್ವಥ್ ನಾರಾಯಣ್ ಅವರು, ತಾನು ವಿಶ್ವ ಮಾನವ, ಒಕ್ಕಲಿಗ ಎಂದು ಹೇಳಿಕೊಂಡಿರುವ ಬಗ್ಗೆ ಪ್ರಸ್ತಾಪಿಸಿದಾಗ ಉತ್ತರಿಸಿದ ಶಿವಕುಮಾರ್ ಅವರು, ‘ಅವರು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ. ಅವರು ರಾಮನಗರವನ್ನು ಕ್ಲೀನ್ ಮಾಡುತ್ತೇವೆ ಎಂದಿದ್ದರು, ಈ ಹಿಂದೆ ರಾಜೀವ್ ಗಾಂಧಿ ಆರೋಗ್ಯ ಇಲಾಖೆ ಕುಲಸಚಿವರ ನೇಮಕ ವಿಚಾರವಾಗಿ ಗೊಂದಲ ಸೃಷ್ಟಿಸಿದ್ದರು. ಅವರ ನೇಮಕ ಮಾಡಿದ್ದು ಯಾರು? ಇನ್ನು ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದ ಬಗ್ಗೆ ಶಿಕ್ಷಣ ಇಲಾಖೆಯೇ ದೂರು ನೀಡಿದೆ. ಆ ಕುಲಸಚಿವರು ಯಾರ ಮನೆಗೆ, ಎಷ್ಟು ಬಾರಿ ಹೋಗಿದ್ದಾರೆ? ಅವರ ಸಚಿವರ ಒಡನಾಟ ಏನು? ಅವರ ನೇತೃತ್ವ ಇರುವ ಸಂಸ್ಥೆಗಳಲ್ಲಿ ಯಾವ ರೀತಿ ಅಕ್ರಮ ನಡೆಯುತ್ತಿದೆ? ಅಲ್ಲೆಲ್ಲ ವಿಶ್ವದ ನಂಟಿದೆ ಎಂದು ಅವರೇ ಹೇಳುವುದಾದರೆ ಎಲ್ಲ ಅಕ್ರಮಗಳಿಗೂ ಅವರೇ ಪಿತಾಮಹಾ ಅಲ್ಲವೇ? ಎಲ್ಲ ಭ್ರಷ್ಟಾಚಾರಗಳಿಗೆ ವಿಶ್ವಮಾನವ ಅವರೇ ಅಲ್ಲವೇ? ಎನ್ಇಪಿ ನಾನೇ ಮೊದಲು ಜಾರಿಗೆ ತರುತ್ತೇನೆ ಎಂದು ಹೆಗಲು ತಟ್ಟಿಕೊಂಡವರು ಈಗೇನು ಮಾಡಿದ್ದಾರೆ?’ ಎಂದು ತಿರುಗೇಟು ನೀಡಿದರು.
ಪ್ರಿಯಾಂಕ್ ಖರ್ಗೆ ನಮ್ಮ ಪಕ್ಷದ ವಕ್ತಾರರು. ಇಂತಿಂತಹ ವಿಚಾರಗಳನ್ನು ಮಾಧ್ಯಮದ ಮುಂದೆ ಪ್ರಸ್ತಾಪ ಮಾಡಿ ಎಂದು ಪಕ್ಷ ಅವರಿಗೆ ಅಧಿಕಾರ ಕೊಟ್ಟಿದೆ. ಅವರು ಪೊಲೀಸ್ ಅಧಿಕಾರಿಗಳ ನೊಟೀಸ್ ಗೆ ಗೌರವಯತವಾಗಿ ಉತ್ತರ ನೀಡಿದ್ದಾರೆ. ಸರ್ಕಾರ ಮೊದಲು ತನ್ನ ಮುಖಕ್ಕೆ ಅಂಟಿರುವ ಕೊಳಕು, ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಸ್ವಚ್ಛ ಮಾಡಿಕೊಳ್ಳಲಿ ಎಂದರು.
PublicNext
05/05/2022 03:51 pm