ಬೆಂಗಳೂರು: ಹಿಜಾಬ್ ಪ್ರಕರಣ ಹೈಕೋರ್ಟ್‌ನಲ್ಲಿ ಸುಧೀರ್ಘ ವಿಚಾರಣೆಯಾಗಿ ಅಂತಿಮ ತೀರ್ಪು ಹೊರಬಂದಿದೆ. ತೀರ್ಪಿನ ಬಗ್ಗೆ ಅಸಮಧಾನ ವ್ಯಕ್ತಪಡಿಸಿರುವ ಕೆಲವು ಮುಸ್ಲಿಂ ಸಂಘಟನೆಗಳು ಇಂದು (ಗುರುವಾರ) ಬಂದ್‌ಗೆ ಕರೆಕೊಟ್ಟಿದ್ದವು. ಈ ಬಂದ್‌ಗೆ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಬಿಜೆಪಿ ತಿರುಗಿ ಬಿದ್ದಿದೆ. ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಸಿದ್ದರಾಮಯ್ಯರ ಮೇಲೆ ವಾಗ್ದಾಳಿ ನಡೆಸಿದೆ.
ಬಿಜೆಪಿ ಮಾಡಿರುವ ಟ್ವೀಟ್‌ಗಳು ಈ ಕೆಳಗಿನಂತಿವೆ...
'ಮಾನ್ಯ ಸಿದ್ದರಾಮಯ್ಯ ಅವರೇ, ನಿಮ್ಮ ತಟ್ಟೆಯಲ್ಲಿ ಬಿದ್ದ ಹೆಗ್ಗಣವನ್ನು ಮೊದಲು ಶುಚಿಗೊಳಿಸಿಕೊಳ್ಳಿ. ಸೋನಿಯಾ ಗಾಂಧಿ ನಾಯಕತ್ವದ ವಿರುದ್ಧ ಧ್ವನಿ ಎತ್ತಿರುವವರು ನಿಮಗಿಂತಲೂ ಮೊದಲು ಕಾಂಗ್ರೆಸ್ ಒಳಮನೆಯ ರಾಜಕಾರಣ ಕಂಡವರು. ನಿಮ್ಮ ಜಗಳಕ್ಕೆ ಬಿಜೆಪಿ ಅಪಪ್ರಚಾರ ನಡೆಸುತ್ತಿದೆ ಎಂಬ ಸಬೂಬು ನೀಡುವುದು ಹಾಸ್ಯಾಸ್ಪದ'.
'ಹಿಜಾಬ್ ಪರವಾಗಿ ವಾದಿಸಲು ಕಾಂಗ್ರೆಸ್ ಪಕ್ಷದ ವತಿಯಿಂದಲೇ ನ್ಯಾಯವಾದಿಗಳನ್ನು ನೇಮಕ ಮಾಡಲಾಗಿತ್ತು. ಈಗ ತೀರ್ಪು ಬಂದ ನಂತರ ಹೋರಾಟ ನಡೆಸುವುದು ಸಂವಿಧಾನಬದ್ಧ ಹಕ್ಕು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹಿಜಾಬ್ ವಿವಾದ ಕೆಪಿಸಿಸಿ ಕಛೇರಿಯಲ್ಲಿ ಹುಟ್ಟಿಕೊಂಡಿದ್ದು ಎನ್ನಲು ಬೇರೇನು ಪುರಾವೆ ಬೇಕು?'
'ಹೈಕೋರ್ಟ್ ಆದೇಶದಲ್ಲಿ ಅಸಮಾಧಾನವಿದ್ದರೆ, ಸುಪ್ರೀಂ ಕೋರ್ಟ್‌ಗೆ ಹೋಗಬಹುದು. ಅದನ್ನು ಬಿಟ್ಟು ಬಂದ್ ಮಾಡುವುದು, ಬಂದ್ ಮಾಡುವುದನ್ನು ಬೆಂಬಲಿಸುವುದು ನ್ಯಾಯಾಂಗ ನಿಂದನೆ ಅಲ್ಲವೇ? ಬಂದ್‌ಗೆ ಬೆಂಬಲ ಸೂಚಿಸಿರುವ ಸಿದ್ದರಾಮಯ್ಯ ಅವರಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲವೇ?' ಎಂದು ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯರಿಗೆ ಪ್ರಶ್ನೆ ಹಾಕಿದೆ.
PublicNext
17/03/2022 06:25 pm