ನವದೆಹಲಿ: ಪಂಚರಾಜ್ಯ ಚುನಾವಣೆಯ ಎಲ್ಲ ಹಂತದ ಮತದಾನ ಪ್ರಕ್ರಿಯೆ ಮುಗಿದಿದೆ. ಈ ಬಾರಿ ಉತ್ತರ ಪ್ರದೇಶದಲ್ಲಿ ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದ್ದು ಈ ನಡುವೆ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಈ ಸಮೀಕ್ಷೆಯ ಪ್ರಕಾರ ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯಲಿದೆ. ಬಹುತೇಕ ಸಮೀಕ್ಷೆಗಳು ಅಂತಿಮವಾಗಿ ಇದೇ ಫಲಿತಾಂಶ ಕೊಟ್ಟಿವೆ.
ಟೈಮ್ಸ್ ನೌ ಸಮೀಕ್ಷೆ ಪ್ರಕಾರ, ಉತ್ತರಾಖಂಡದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಸಿಗಲಿವೆ ಎಂದು ಹೇಳಲಾಗಿದೆ. ರಿಪಬ್ಲಿಕ್ ಸಮೀಕ್ಷೆಯಲ್ಲೂ ಬಿಜೆಪಿ ಬಹುಮತದ ಪಕ್ಷವಾಗಿ ಹೊರ ಹೊಮ್ಮಲಿದೆ ಎನ್ನಲಾಗಿದೆ. ಆದರೆ ಸೀ-ವೋಟರ್ ಸಮೀಕ್ಷೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುತ್ತದೆ ಎಂದು ಹೇಳಲಾಗಿದೆ.
ಇನ್ನು ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದ್ದು, ಆಡಳಿತಾರೂಢ ಕಾಂಗ್ರೆಸ್ ಮುಖಭಂಗ ಅನುಭವಿಸಲಿದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ.
ಗೋವಾ 40 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆ ಕಡಿಮೆ ಎಂದು ಹಲವು ಸಮೀಕ್ಷೆಗಳು ಹೇಳಿವೆ. ಹಲವು ಸಮೀಕ್ಷೆಗಳಲ್ಲಿ ಪಕ್ಷೇತರು ಮತ್ತು ಇತರ ಪ್ರಾದೇಶಿಕ ಪಕ್ಷಗಳು ಗೆಲುವು ಸಾಧಿಸಲಿದ್ದು, ಬಿಜೆಪಿಗೆ ಅಧಿಕಾರ ನಡೆಸಲು ಅವರ ಬೆಂಬಲ ಅನಿವಾರ್ಯ ಎಂಬ ವಾತಾವರಣ ಕಾಣುತ್ತಿದೆ.
60 ಸ್ಥಾನಗಳನ್ನು ಹೊಂದಿರುವ ಈಶಾನ್ಯ ರಾಜ್ಯ ಮಣಿಪುರದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹಲವು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಪಂಜಾಬ್‌ನ 117 ಸ್ಥಾನಗಳಲ್ಲಿ ಆಪ್ ಭಾರಿ ಸ್ಥಾನಗಳನ್ನು ಗೆದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಕೂಟ, ಅಕಾಲಿದಳಕ್ಕೆ ಶಾಕ್ ನೀಡುವ ಭವಿಷ್ಯವನ್ನು ಸಮೀಕ್ಷೆಗಳು ಹೇಳುತ್ತಿವೆ.
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಪ್ರಕಾರ ಗೋವಾದಲ್ಲಿ ಬಿಜೆಪಿ 14 ರಿಂದ 18, ಕಾಂಗ್ರೆಸ್ 15-20, ಎಂಜಿಪಿ 2-5 ಇತರರು 0-4 ಸ್ಥಾನ ಗೆಲ್ಲಲಿದ್ದಾರೆ. ಜನ್ ಕಿ ಬಾತ್ ಸಮೀಕ್ಷೆಯ ಪ್ರಕಾರ ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ಲಕ್ನೋದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲಿದೆ. ಸಮೀಕ್ಷೆಯು ಬಿಜೆಪಿ 222 ರಿಂದ 260 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ.
ನಿಖರ ಸಮೀಕ್ಷೆಗಳಿಗೆ ಖ್ಯಾತಿ ಪಡೆದಿರುವ ಚಾಣಕ್ಯ ಪಂಜಾಬ್‌ನಲ್ಲಿ ಎಎಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದು,
ಆಮ್ ಆದ್ಮಿ ಪಕ್ಷ 100 ಸ್ಥಾನ ಗೆಲ್ಲಲಿದ್ದು, ಕಾಂಗ್ರೆಸ್ ಕೇವಲ 10 , ಶಿರೋಮಣಿ ಅಕಾಲಿದಳ ಮತ್ತು ಬಿ ಎಸ್ ಪಿ ಮೈತ್ರಿಕೂಟ 6 | ಬಿಜೆಪಿ ಮೈತ್ರಿಕೂಟ ಕೇವಲ 1 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ನೀಡಿದೆ. ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ ಗೋವಾದಲ್ಲಿ ಬಿಜೆಪಿ 17, ಕಾಂಗ್ರೆಸ್ +: 17 ಎಎಪಿ: 1 ಮತ್ತು ಇತರರು 4 ಸ್ಥಾನ ಗೆಲ್ಲಲಿದ್ದಾರೆ.
ಎಬಿಪಿ – ಸಿ ವೋಟರ್ ಸಮೀಕ್ಷೆಗಳ ಪ್ರಕಾರ ಉತ್ತರಾಖಂಡದಲ್ಲಿ ಬಿಜೆಪಿ: 26-32 ಕಾಂಗ್ರೆಸ್ 32-38 ಆಪ್: 0-2 (ಒಟ್ಟು ಸ್ಥಾನಗಳು: 70) ಸ್ಥಾನ ಗಳಿಸಲಿದೆ. ನ್ಯೂಸ್18 ಸಮೀಕ್ಷೆ ಪ್ರಕಾರ ಉತ್ತರಪ್ರದೇಶದಲ್ಲಿ ಬಿಜೆಪಿ: 262-277 , ಸಮಾಜವಾದಿ ಪಕ್ಷ :119-134,ಬಿಎಸ್ ಪಿ : 7-15 , ಕಾಂಗ್ರೆಸ್ : 3-8 ಸ್ಥಾನ ಗೆಲ್ಲಲಿದೆ.
PublicNext
07/03/2022 09:20 pm