ಬೆಂಗಳೂರು: ಇದು ಹೋರಾಟವಲ್ಲ. ಕೇವಲ ಹೈಟೆಕ್ ಪಾದಯಾತ್ರೆ. ಹಣ ಕೊಟ್ಟು ಬಸ್‌ಗಳಲ್ಲಿ ಜನರನ್ನು ಕರೆತಂದು ಪಾದಯಾತ್ರೆ ಮಾಡಿದ್ರೆ ಮೇಕೆದಾಟು ಸಾಕಾರ ಎಂದೆಂದಿಗೂ ಅಸಾಧ್ಯ. ಇದು ʼಸೋಂಕಿನ ಸಮಾರಾಧನೆʼಯಷ್ಟೇ ಹೊರತು ಹೋರಾಟವಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರ ಪಾದಯಾತ್ರೆ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು 'ಕಾಂಗ್ರೆಸ್ ಪಕ್ಷ ಒಂದು ಜವಾಬ್ದಾರಿ ಪಕ್ಷವಾಗಿದ್ದರೆ ತಕ್ಷಣ ಪಾದಯಾತ್ರೆ ನಿಲ್ಲಿಸಲಿ. ಗಂಡಸ್ತನ ತೋರಿಸುವುದಕ್ಕೆ ಹೋಗಿ ʼಮೇಕೆದಾಟನ್ನು ಮಸಣʼ ಮಾಡುವುದು ಬೇಡ. ಮೇಕೆದಾಟು ಪಾದಯಾತ್ರೆಯನ್ನು ʼಓಮಿಕ್ರಾನ್ ಜಾತ್ರೆʼಯನ್ನಾಗಿ ಪರಿವರ್ತಿಸಿದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಹೈಕೋರ್ಟ್ ಛೀಮಾರಿ ಹಾಕಿದೆ. ಸೋಂಕನ್ನು ನಿರ್ಲಕ್ಷಿಸಿದ ಸರಕಾರಕ್ಕೂ ಚಾಟಿ ಬೀಸಿದೆ. ನೀರಿನ ನೆಪದ ಈ ದೊಂಬರಾಟಕ್ಕೆ ಕೊನೆ ಹಾಡಬೇಕು ಎಂದಿದ್ದಾರೆ.
ಕೋವಿಡ್ ರಕ್ಕಸ ರೂಪ ಪಡೆದು ವೇಗವಾಗಿ ಹರಡುತ್ತಿದೆ. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಅನೇಕ ನಾಯಕರೇ ಪಾಸಿಟವ್ ಆಗಿ ಆಸ್ಪತ್ರೆ ಸೇರಿಕೊಂಡಿದ್ದಾರೆ. ಸರಿಯಾಗಿ ಪರೀಕ್ಷೆ ನಡೆಸಿದರೆ ದೊಡ್ಡ ಸಂಖ್ಯೆಯ ಜನರು ಸೋಂಕಿತರಾಗಿರುವುದು ಬಯಲಾಗುತ್ತದೆ ಎಂದು ಹೇಳಿದ್ದಾರೆ.
PublicNext
12/01/2022 10:59 pm