ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಕೆರೆ ತುಂಬಿಸುವ, ಶೈಕ್ಷಣಿಕ ಯೋಜನೆಗಳಿಗೆ ಜಾಗ, ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿಂದತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಜೊತೆಗೆ ರಾಜ್ಯದ ಎಲ್ಲ ಕಡೆ ಕೋವಿಡ್ ಪ್ರೋಟೋಕಾಲ್ ಬೇಕಾ? ಅಂತ ಸಚಿವರು ಕೇಳಿದ್ದಾರೆ. ಹೀಗಾಗಿ ನಾಲ್ಕೈದು ದಿನ ಬಿಟ್ಟು ತಜ್ಞರ ಜತೆ ಚರ್ಚಿಸಿ ಇತರ ನಗರಗಳಿಗೆ ರಿಲೀಫ್ ಮಾಡಲು ನಿರ್ಧರಿಸಲಾಗಿದೆ. ಕೆಪಿಎಸ್‌ಸಿ 2011ರ ಬ್ಯಾಚ್ ಬಗ್ಗೆ ಪರಿಶೀಲನೆ ಮಾಡಿ ಕಡತ ಮಂಡಿಸಲು ಕಾನೂನು ಸಚಿವರಿಗೆ ಸೂಚನೆ ನೀಡಿದ ಸಿಎಂ, ಅಂಬರೀಷ್ ಸ್ಮಾರಕ ನಿರ್ಮಿಸಲು 12 ಕೋಟಿ ಬಿಡುಗಡೆಗೆ ಅಸ್ತು ಎಂದಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ನ್ಯಾಯಾಲಯದ ಸಂಕೀರ್ಣಕ್ಕೂ ಹೆಚ್ಚುವರಿ 16.80 ಕೋಟಿ ರೂಪಾಯಿಗೆ ಅನುಮತಿ. ಕಂದಾಯ ಇಲಾಖೆ ವತಿಯಿಂದ ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡು ಗ್ರಾಮದಲ್ಲಿ ಜನಾರ್ಧನ ದೇವಾಲಯಕ್ಕೆ ಸೇರಿದ ಸರ್ಕಾರಿ ಭೂಮಿಯ 10 ಸೆಂಟ್ ಜಾಗವನ್ನು ಭಂಟರ ಸಂಘಕ್ಕೆ ವಾರ್ಷಿಕ ಬಾಡಿಗೆ ಆಧಾರದಲ್ಲಿ ಮಂಜೂರಾತಿ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮೂಕನಹಳ್ಳಿ ಗ್ರಾಮದಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಒಕ್ಕಲಿಗ ಸಂಘದವರಿಗೆ 2 ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಆದರೆ, ಶೈಕ್ಷಣಿಕ ಉದ್ದೇಶ ಮಾರ್ಪಾಟು ಮಾಡಿ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಎಂದು ತಿದ್ದುಪಡಿ ಮಾಡಿ ಅನುಮತಿ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಕಬ್ಬಳ್ಳಿ ಗ್ರಾಮದ ಹತ್ತಿರ 22 ಎಕರೆ 32 ಗುಂಟೆ ಜಮೀನನ್ನು ಆದಿಚುಂಚನಗಿರಿ ಮಠಕ್ಕೆ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಮಂಜೂರು ಮಾಡಲಾಗಿದೆ. ಬಾಗಲಕೋಟೆ ತಾಲೂಕಿನಲ್ಲಿ 5 ಎಕರೆ ಸರ್ಕಾರಿ ಗೋಮಾಳನ್ನು ಪರಿವರ್ತನಾ ಸಾಮಾಜಿಕ ಸಂಘ ಮುಧೋಳ ಇವರಿಗೆ ಮಂಜೂರಾತಿ ನೀಡಲಾಗಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಚೇರಿಗೆ ಐಟಿ ಉಪಕರಣಗಳ ಪೂರೈಕೆ, ನಿರ್ವಹಣೆ, ಮಾನವ ಸಂಪನ್ಮೂಲ ಸೇವಾ ಪೂರೈಕೆದಾರರ ಆಯ್ಕೆ ಮಾಡಲು 406.44 ಕೋಟಿ ರೂಪಾಯಿ ಅನುದಾನ. ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆ ತಾಲೂಕಿನ ಮಾರ್ಪಾಡಿ ಗ್ರಾಮದಲ್ಲಿ 25 ಸೆಂಟ್ ಜಾಗವನ್ನು ಪ್ರೇರಣಾ ಸೇವಾ ಟ್ರಸ್ಟ್ ಗೆ ಸೇವಾ ಕೇಂದ್ರ ನಿರ್ಮಾಣ ಮಾಡಲು ನೀಡಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಂಡಿರುವ ಪ್ರತಿ ಮನೆಗಳಿಗೆ ನಲ್ಲಿಗಳ ಮೂಲಕ ನೀರು ಸರಬರಾಜು ಜಲ್ ಜೀವನ್ ಮಿಷನ್ ಮುಂದುವರಿದ ಹಂತದ ಯೋಜನೆಗಾಗಿ 9,152 ಕೋಟಿ ರೂಪಾಯಿ ವೆಚ್ಚ ಮಾಡಬೇಕಾಗಿದೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರದಿಂದ 3890 ಕೋಟಿ, ವಿಶ್ವ ಬ್ಯಾಂಕ್ ನೆರವು 1167 ಕೋಟಿ ಹಾಗೂ ಇತರೆ ಮೂಲಗಳಿಂದ 4072 ಕೋಟಿ ಸಂಗ್ರಹಿಸಿ ಕಾರ್ಯಕ್ರಮ ಅನುಷ್ಠಾನಕ್ಕೆ ರಾಜ್ಯ ಸರ್ಕಾರದಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
36 ಕೋಟಿ ರೂಪಾಯಿ ವೆಚ್ಚದಲ್ಲಿ ಮೈಸೂರು ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿದೆ. ಆದರೆ, ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅಂದಾಜು 16.5 ಕೋಟಿ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಬಿಎಂಟಿಸಿ 30 ಏರ್ ಕಂಡೀಷನ್ ಡ ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲು ಈ ಹಿಂದೆ ತೀರ್ಮಾನ ಕೈಗೊಳ್ಳಲಾಗಿತ್ತು. ಕೋವಿಡ್ ಪರಿಣಾಮದಿಂದ 100 ಕೋಟಿ ರೂಪಾಯಿ ವೆಚ್ಚದಲ್ಲಿ ಎಸಿ ರಹಿತ 300 ಎಲೆಕ್ಟ್ರಿಕ್ ಬಸ್ ಗಳನ್ನು ಖರೀದಿ ಮಾಡಲು ನಿರ್ಧರಿಸಲಾಗಿದೆ.
ಕರ್ನಾಟಕ ಮೋಟಾರು ವಾಹನ ಅಡಿಯಲ್ಲಿ ಕೊಯ್ಲು ಮಾಡುವ ಯಂತ್ರಗಳಿಗೆ ತರಿಗೆ ಇರಲಿಲ್ಲ. ಶೇಕಡ 6ರಷ್ಟು ತೆರಿಗೆ ಕೊಡಬೇಕೆಂದು ಕಾನೂನು ಮಾಡಲಾಗಿತ್ತು. ಕಳೆದ ಬಾರಿ ಅಧಿವೇಶನದಲ್ಲಿ ಕಬ್ಬು ಬೆಳೆಗಾರರಿಗೆ ಶೇಕಡ 3ರಷ್ಟು ದರವನ್ನು ಇಳಿಕೆ ಮಾಡಲಾಗಿರುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಅಲ್ಲದೆ, ಮೈಸೂರು ಜೆಪಿ ನಗರದಲ್ಲಿ ಸಿದ್ದಲಿಂಗೇಶ್ವರ ಟ್ರಸ್ಟ್ ಗೆ ಗುತ್ತಿಗೆ ಆಧಾರದಲ್ಲಿ ಜಾಗ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
PublicNext
06/01/2022 10:30 pm