ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಷಿ ಕಾನೂನು ರದ್ದು... ಮೋದಿ ಸೋಲೊ, ವಿರೋಧಿಗಳಿಗೆ ಮಾಸ್ಟರ್ ಸ್ಟ್ರೋಕೋ?

ಪಬ್ಲಿಕ್ ನೆಕ್ಸ್ಟ್ ವಿಶ್ಲೇಷಣೆ : ಕೇಶವ ನಾಡಕರ್ಣಿ

ಅಂತೂ ಇಂತೂ ಪ್ರಧಾನಿ ಮೋದಿ ವಿವಾದಿತ ಕೃಷಿ ಕಾನೂನು ರದ್ದುಗೊಳಿಸಿದ್ದಾರೆ. ಎಷ್ಟೆ ವಿರೋಧವಿದ್ದರೂ ನೋಟ್ ಬ್ಯಾನ್ ಸೇರಿಂದತೆ ಯಾವುದೇ ಕಠಿಣ ತೀರ್ಮಾನಗಳಿಂದ ಹಿಂದೆ ಸರಿಯದಿದ್ದ ಮೋದಿ, ಯಾವುದೇ ಮುನ್ಸೂಚನೆ ಇಲ್ಲದೆ ಕೃಷಿ ಕಾನೂನುಗಳಿಗೆ ಮಂಗಳ ಹಾಡಿದ್ದು ವಿಪಕ್ಷಗಳಿಗಷ್ಟೇ ಏಕೆ ಸ್ವಪಕ್ಷದ ನಾಯಕರಿಗೂ ದಿಗ್ಭ್ರಮೆ ಉಂಟು ಮಾಡಿದೆ.

ಇದು ನಮ್ಮ ಗೆಲುವು ಎಂದು ಕಾಂಗ್ರೆಸ್ ಸೇರಿದಂತೆ ಎಲ್ಲ ಮೋದಿ ವಿರೋಧಿಗಳು ತಮ್ಮ ಬೆನ್ನು ತಾವು ತಟ್ಟಿಕೊಳ್ಳುತ್ತಿರಬಹುದು. ಮುಂಬರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಭಯದಿಂದಲೂ ಮೋದಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದೂ ಹೇಳಬಹುದು.

ಆದರೆ ಪ್ರಧಾನಿ ಮೋದಿ ಅವರ ರಾಜಕೀಯ ತಂತ್ರಗಾರಿಕೆ ಆಳ ಯಾರೂ ಅಳೆಯಲು ಸಾಧ್ಯವಿಲ್ಲ. ಯಾವುದೇ ಸುಳಿವೂ ಇಲ್ಲದೆ ಕೈಗೊಂಡ ಮೋದಿ ನಿರ್ಧಾರದಿಂದ ರೈತ ನಾಯಕ ರಾಕೇಶ್ ಸಿಂಗ್ ಟಿಕಾಯತ್ ಹಾಗೂ ಯೋಗೇಂದ್ರ ಯಾದವ್ ಅವರಂತಹ ಆಂದೋಲನ ಜೀವಿಗಳಿಗೆ ಭಾರಿ ಶಾಕ್ ಆಗಿದ್ದರೆ, ಮುಂಬರುವ ಚುನಾವಣೆಗಳಲ್ಲಿ ಇದನ್ನೆ ರಾಜಕೀಯ ದಾಳವಾಗಿ ಬಳಸಿಕೊಂಡು ಮೋದಿಯನ್ನು ಹಣಿಯಬೇಕೆಂದಿದ್ದ ಕಾಂಗ್ರೆಸ್ಸಿನ ರಾಹಲ್ ಗಾಂಧಿ, ಸಮಾಜವಾದಿ ನಾಯಕ ಅಖಿಲೇಶ್ ಯಾದವ್ ಅವರಿಗೆ ಮರ್ಮಾಘಾತವಾಗಿದೆ.

ಈ ಎಲ್ಲ ನಾಯಕರಿಗೆ ರೈತರ ಹಿತ ಬೇಕಿರಲಿಲ್ಲ ಬದಲಾಗಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕಾಗಿತ್ತು. ಮುಂಬರುವ ಪಂಜಾಬ್ ಚುನಾವಣೆಯಲ್ಲಿ ಇದೇ ರೈತ ಆಂದೋಲನ ಮುಂದಿಟ್ಟುಕೊಂಡು ಬಿಜೆಪಿಗೆ ಚಳ್ಳೆಹಣ್ಣು ತಿನ್ನಿಸಬೇಕೆಂದಿದ್ದ ಕಾಂಗ್ರೆಸ್ ಆಸೆಗೆ ತಣ್ಣೀರೆರಚಿದಂತಾಗಿದೆ. ಇದೇ ವೇಳೆ ಕಾಂಗ್ರೆಸ್ ಬಿಟ್ಟು ಹೊಸ ಪಕ್ಷ ರಚಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಕ್ಯಾ.ಅಮರೀಂದ್ರಸಿಂಗ್ ಈಗ ಬಿಜೆಪಿ ಜೊತೆ ಕೈ ಜೋಡಿಸಲು ಮಾರ್ಗ ಸುಲಭವಾದಂತಾಗಿದೆ. ಏಕೆಂದರೆ ಕೃಷಿ ಕಾನೂನು ಕೈಬಿಟ್ಟರೆ ಮಾತ್ರ ಸಖ್ಯ ಬೆಳೆಸುವುದಾಗಿ ಅಮರೀಂದ್ರಸಿಂಗ್ ಶರತ್ತು ಹಾಕಿದ್ದರು.

ಒಂದು ರೀತಿ ನೋಡಿದರೆ ಕೃಷಿ ಕಾನೂನು ರದ್ದತಿ ನಿರ್ಧಾರದಲ್ಲಿ ಕ್ಯಾ. ಅಮರಿಂದ್ರಸಿಂಗ್ ಪಾತ್ರ ಬಹು ದೊಡ್ಡದು ಎಂದೇ ಹೇಳಲಾಗುತ್ತಿದೆ.

ರೈತ ಹೋರಾಟದ ಮುಂಚೂಣಿಯಲ್ಲಿದ್ದದ್ದೇ ಸಿಖ್ ಹಾಗೂ ಜಾಟ್ ಸಮುದಾಯ. ಹೇಗೂ ಮೋದಿ ಎರಡೂ ಸಮುದಾಯದ ವಿರೋಧ ಕಟ್ಟಿಕೊಂಡಿದ್ದರಿಂದ ತನ್ನ ಗೆಲವು ಸುಲಭ ಎಂದು ಭಾವಿಸಿದ ಕಾಂಗ್ರೆಸ್ ಲೆಕ್ಕಾಚಾರ ಈಗ ಉಲ್ಟಾ.

ಉತ್ತರ ಪ್ರದೇಶ ಪರಿಸ್ಥಿತಿಯೂ ಭಿನ್ನವಾಗಿರಲಿಲ್ಲ. ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಥವಾ ಮಾಯಾವತಿಗೆ ರೈತರ ಹಿತ ಕಾಪಾಡುವುದು ಬೇಕಿರಲಿಲ್ಲ. ಒಂದು ವೇಳೆ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ಕಾರಣಕ್ಕೆ ಎಸ್ಪಿ ಮತ್ತು ಬಿಎಸ್ಪಿ ನಾಯಕರು ಹೋರಾಟಕ್ಕೆ ಬೆಂಬಲ ನೀಡುತ್ತಿದ್ದರು ಎಂಬುದು ಸತ್ಯವೇ ಆಗಿದ್ದರೆ ಕಾನೂನು ರದ್ದಾಗಿದ್ದನ್ನು ಸ್ವಾಗತಿಸಬೇಕಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಆದರೆ ಚುನಾವಣೆಯಲ್ಲಿ ಮೋದಿ ವಿರುದ್ಧದ ಒಂದು ದೊಡ್ಡ ಅಸ್ತ್ರ ಕೈಬಿಟ್ಟು ಹೋಯಿತಲ್ಲ ಎಂದು ಪೇಚಾಡ ತೊಡಗಿದ್ದಾರೆ.

ರೈತ ಹೋರಾಟವನ್ನೆ ಮುಂದಿಟ್ಟುಕೊಂಡು ಪಶ್ಚಿಮ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಜಾಟ್ ಸಮುದಾಯದ ಮತಗಳನ್ನು ಗಿಟ್ಟಿಸಿಕೊಳ್ಳಲು ಅಖಿಲೇಶ್ ತಂತ್ರಗಾರಿಕೆ ನಡೆಸಿದ್ದರು. ಆದರೆ ಮೋದಿ ಮಾಸ್ಟರ್ ಸ್ಟ್ರೋಕ್ ಎಲ್ಲವನ್ನೂ ಬುಡಮೇಲು ಮಾಡಿದಂತಿದೆ. ಕೃಷಿ ಕಾನೂನು ಹಿಂಪಡೆದರೆ ಮಾತ್ರ ನಿಮ್ಮೊಡನೆ ಬರುತ್ತೇವೆ ಎಂದು ಹೇಳುತ್ತಿದ್ದ ಜಾಟ್ ನಾಯಕರು ಅಖಿಲೇಶ್ ಬದಲಾಗಿ ಈಗ ಬಿಜೆಪಿ ಜೊತೆ ಚುನಾವಣಾ ಒಪ್ಪಂದ ಮಾಡಿಕೊಳ್ಳಲು ಮುಂದಾಗಬಹುದು.

Edited By :
PublicNext

PublicNext

20/11/2021 02:42 pm

Cinque Terre

33.25 K

Cinque Terre

19

ಸಂಬಂಧಿತ ಸುದ್ದಿ