ಬೆಂಗಳೂರು: ಪೇಜಾವರ ಸ್ವಾಮೀಜಿ ಮತ್ತು ಮಾಂಸಾಹಾರ ಸೇವನೆ ಕುರಿತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಹಂಸಲೇಖ ಅವರು ಕ್ಷಮೆಯಾಚಿಸಿದ್ದಾರೆ. ಹೀಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಟೀಕೆ, ಆಕ್ರೋಶ ಕಡಿಮೆಯಾಗಿಲ್ಲ. ಇದೇ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಹೆಚ್.ಸಿ.ಮಹಾದೇವಪ್ಪ ಅವರು ಹಂಸಲೇಖ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಈ ಬಗ್ಗೆ ಹೆಚ್.ಸಿ.ಮಹಾದೇವಪ್ಪ ಅವರು ಫೇಸ್‌ಬುಕ್‌ನಲ್ಲಿ 'ಹಂಸಲೇಖ ಪ್ರಸಂಗ' ಟೈಟಲ್ ನೀಡಿ ಕೆಲ ವಿಚಾರಗಳನ್ನು ಬರೆದುಕೊಂಡಿದ್ದಾರೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ ಏನಿದೆ?:
ಹಂಸಲೇಖ ಪ್ರಸಂಗ: ದಲಿತರ ಸಾಮಾಜಿಕ ಅಸಮಾನತೆಯ ವಿರುದ್ಧ ಪ್ರತಿರೋಧದ ದನಿಯಂತೆ ಆಡಿದ ಮಾತುಗಳಿಗೆ ಕ್ಷಮೆ ಕೇಳುವಂತಹ ಪರಿಸ್ಥಿತಿ ಉಂಟಾಗಿರುವುದು ಬಹುದೊಡ್ಡ ಸಾಮಾಜಿಕ ದುರಂತ. ಹಂಸಲೇಖರ ಒಟ್ಟು ಮಾತಿನಲ್ಲಿ "ಪೇಜಾವರರು ದಲಿತರ ಮನೆಯಲ್ಲಿ ಚಿಕನ್ ತಿನ್ನುತ್ತಾರಾ?" ಎಂಬ ಮಾತಿಗೆ ನನ್ನ ಸಹಮತವಿಲ್ಲ. ಕಾರಣ ಆಹಾರವು ಒಬ್ಬರ ವೈಯಕ್ತಿಕ ಹಕ್ಕು. ಇಂತಹದ್ದೇ ತಿನ್ನಬೇಕೆಂಬುದು ಅಸಂವಿಧಾನಿಕ ಎನಿಸಿಕೊಳ್ಳುತ್ತದೆ. ಮಿಕ್ಕಂತೆ ಹಂಸಲೇಖ ಅವರ ಮಾತಿನಲ್ಲಿ ಯಾವ ತಪ್ಪು ಕೂಡ ಇಲ್ಲ. ಅವರು ಈಗಿನ ಜಾತಿ ವ್ಯವಸ್ಥೆಯ ಅಸಮಾನತೆಯಿಂದ ಘಾಸಿಗೊಂಡ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿರುವ ಸತ್ಯವನ್ನೇ ಹೇಳಿದರೂ ಕೂಡ ಅದಕ್ಕೆ ಕ್ಷಮೆ ಯಾಚಿಸುವಂತಹ ವ್ಯವಸ್ಥೆ ಉಂಟಾಗಿರುವುದು ಅಪಾಯಕಾರಿ ಸಾಮಾಜಿಕ ಬೆಳವಣಿಗೆ.
ಅದರಲ್ಲೂ ಹಂಸಲೇಖ ಅವರು ಕ್ಷಮೆ ಕೇಳಿದ ನಂತರವೂ ಷರತ್ತಿಲ್ಲದ ಕ್ಷಮೆ ಕೇಳಬೇಕೆಂದು ಮತ್ತೆ ಹೇಳುವುದು ನೋಡಿದರೆ ಇದು ಆತಂಕದ ಸಂದರ್ಭವೇ ಹೌದು. ಹಂಸಲೇಖ ಅವರು ಎದೆಗುಂದುವ ಅಗತ್ಯವೇನಿಲ್ಲ. ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ಸತ್ಯ ಹೇಳಿದರೆ ಅವರನ್ನು ಸದಾ ಸಂವಿಧಾನವೇ ರಕ್ಷಣೆ ಮಾಡುತ್ತದೆ. ಇಲ್ಲದೇ ಹೋದರೆ ಹೀಗೆ ಕ್ಷಮೆ ಕೇಳುವ ಸ್ಥಿತಿ ಬರುತ್ತದೆ. ಒಂದು ಸಣ್ಣ ದೋಷವೇ ಅಪರಾಧ ಎನ್ನುವಂತೆ ಬಿಂಬಿಸುವ ಮತೀಯವಾದಿ ವ್ಯವಸ್ಥೆ ಬಲವಾಗಿರುವುದೇ ಇದಕ್ಕೆ ಕಾರಣ ಎಂದು ಹೆಚ್.ಸಿ.ಮಹಾದೇವಪ್ಪ ಬರೆದುಕೊಂಡಿದ್ದಾರೆ.
PublicNext
16/11/2021 09:16 am