ವಿಜಯಪುರ : ರಾಜ್ಯದಲ್ಲಿ ಎರಡು ಕ್ಷೇತ್ರದ ಬೈ ಎಲೆಕ್ಷನ್ ದಂಗಲ್ ದಿನೆ ದಿನೇ ರಂಗೇರುತ್ತಿದೆ. ಶತಾಯ ಗತಾಯ ಕ್ಷೇತ್ರ ಉಳಿಸಿಕೊಳ್ಳೋಕೆ ಪ್ರತಿ ಪಕ್ಷಗಳು ಸರ್ಕಸ್ ನಡೆಸುತ್ತಿವೆ.
ಉಪಚುನಾವಣಾ ಅಖಾಡಕ್ಕೆ ಧುಮುಕಿ ಮತಬೇಟೆ ನಡೆಸುತ್ತಿರುವ ರಾಜಕೀಯ ಘಟಾನುಘಟಿಗಳು ಪರಸ್ಪರ ಕೆಸರೆರಚಾಟದ ಮಧ್ಯೆಯೇ ಬಿರುಸಿನ ಮತಯಾಚನೆ ನಡೆಸಿದ್ದಾರೆ.
ಸದ್ಯ ಸಿಂದಗಿ ಉಪಚುನಾವಣೆ ಹಿನ್ನಲೆಯಲ್ಲಿ ಆಲಮೇಲ ಪಟ್ಟಣದಲ್ಲಿ ಮತಯಾಚನೆ ಮುಂದಾದ ಯತ್ನಾಳ್ ವೇದಿಕೆಗೆ ಬರ್ತಿದ್ದಂತೆ ಜನ ಹುಲಿ.. ಹುಲಿ ಎಂದು ಕೂಗಿದ್ದಾರೆ. ಇನ್ನು ವಿ ಸೋಮಣ್ಣ ಕಾಲು ಇಟ್ಟಲ್ಲಿ ಗೆಲವು ಖಚಿತ ಎಂದು ಸೋಮಣ್ಣರನ್ನ ಹಾಡಿ ಹೊಗಳಿದ ಯತ್ನಾಳ್ ಬೊಮ್ಮಾಯಿ 18 ತಿಂಗಳು ಸಿಎಂ ಆಗಿರಬೇಕು ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಹೋಗಬೇಕು ಎಂದಿದ್ದಾರೆ.
ಬೊಮ್ಮಾಯಿ ಸಿಎಂ ಆದ ಮೇಲೆ ನನಗೆ ಒಂದು ಧೈರ್ಯ ಬಂದಿದೆ. ಕೈ ಹಿಡಿದು ಕೆಲಸ ಮಾಡಿಸಿಕೊಳ್ಳುವ ಧೈರ್ಯ ಬಂದಿದೆ. ರಾಹುಲ್ ಗಾಂಧಿ ಅಫೀಮು ಅಮಲಿನಲ್ಲಿ ಇರ್ತಾರೆ, ರಾಹುಲ್ ಗಾಂಧಿ ಒಬ್ಬ ಹುಚ್ಚ, ಸದಾ ಅಫೀಮು ಸೇವಿಸಿ ನಶೆಯಲ್ಲೆ ಇರ್ತಾನೆ ಅಂತ ಹುಚ್ಚನಿಗೆ ಓಟು ಹಾಕ್ತಿರಾ? ಎಂದರು.
ಇದೇ ವೇಳೆ ಸಿದ್ದರಾಮಯ್ಯ ಹಾಗೂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್ ಕುಮಾರಸ್ವಾಮಿ ಬಗ್ಗೆ ನನಗೆ ಎಲ್ಲಾ ಗೊತ್ತಿದೆ ಅವರ ರಹಸ್ಯ ನನ್ನ ಬಳಿ ಇದೆ ಬಾಯ್ಬಿಟ್ಟರೇ ಅದು ಬೇರೆಯಾಗುತ್ತೆ ಎಂದಿದ್ದಾರೆ.
ವಿ ಸೋಮಣ್ಣನವರಿಗೆ ಬೆಂಗಳೂರಿನ ಉಸ್ತುವಾರಿ ಕೊಡಿ ಹಿಂದಿಂದೆ ಓಡಾಡುವವರಿಗೆ ಕೊಡಬೇಡಿ ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿದ ಇವರಿಗೆ ಉಸ್ತುವಾರಿ ಕೊಡಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.
PublicNext
19/10/2021 08:22 pm