ಮೈಸೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ತಡರಾತ್ರಿ ಭೇಟಿಯಾಗಿ ಮಾತುಕತೆ ನಡೆಸಿದ್ದೇ ಆದಾಯ ತೆರಿಗೆ ದಾಳಿಗೆ ಮೂಲ ಕಾರಣ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೊರ ಬಾಂಬ್ ಸಿಡಿಸಿದ್ದಾರೆ.
ನಗರದ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮೊನ್ನೆ ನಡೆದ ಆದಾಯ ತೆರಿಗೆ ದಾಳಿ ಏನಿದೆಯೋ, ಅದು ರಾಜಕೀಯ ತಿಳಿದಿರುವಂತಹ ಅಲ್ಪಸ್ವಲ್ಪ ಪ್ರಜ್ಞೆ ಇರುವಂತವರಿಗೆ, ಯಾವ ಕಾರಣಕ್ಕಾಗಿ ರೈಡ್ ನಡೆದಿದೆ ಎನ್ನುವುದು ಗೊತ್ತಿರುವಂತಹ ವಿಚಾರ. ಇಂದಿನ ದಿನಪತ್ರಿಕೆಯೊಂದರಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಫೋಟೋ ಹಾಕಿ (ಹೆಸರು ಉಲ್ಲೇಖಿಸದೇ, ಬಿಎಸ್‌ವೈ ಮತ್ತು ಸಿದ್ದರಾಮಯ್ಯ) ಇಬ್ಬರ ನಡುವೆ ಒಳಗಡೆ ಏನೋ ನಡೀತಾ ಇತ್ತು ಎನ್ನುವುದರ ಬಗ್ಗೆ ವರದಿಯಾಗಿದೆ. ಆ ವಿಚಾರ ಗೊತ್ತಾಗಿಯೇ ರೈಡ್ ಮಾಡಿಸಿರುವುದು" ಎಂದು ಕುಟುಕಿದರು.
ರಾಜ್ಯದಲ್ಲೂ ಅವರದ್ದೇ ಸರಕಾರವಿದೆ, ಕೇಂದ್ರದಲ್ಲೂ ಅವರದ್ದೇ ಸರಕಾರವಿದೆ. ತನಿಖಾ ದಳಗಳು ಅವರ ಸುಪುರ್ದಿಯಲ್ಲೇ ಇರುವುದರಿಂದ, ಅವರನ್ನು (ಬಿಎಸ್‌ವೈ) ತಮ್ಮ ನಿಯಂತ್ರಣದಲ್ಲಿ ಇರಿಸಲು ಈ ದಾಳಿ ನಡೆದಿದೆ. ಅವರಿಗೆ (ಕೇಂದ್ರ ಸರಕಾರ), ಅವರದ್ದೇ ಆದ ಮೂಲಗಳು ಇರುತ್ತವೆ. ನಾನು ಎಂದೂ ಯಡಿಯೂರಪ್ಪನವರು ಕ್ಲೀನ್ ಹ್ಯಾಂಡ್ ಎಂದು ಸರ್ಟಿಫಿಕೇಟ್ ನೀಡಿದವನಲ್ಲ" ಎಂದು ವಾಗ್ದಾಳಿ ನಡೆಸಿದರು.
PublicNext
12/10/2021 05:26 pm