ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವಿನ ಟಾಕ್ ಫೈಟ್ ಮುಂದುವರೆದಿದೆ. ದೇಶವಿರೋಧಿ ಶಕ್ತಿಗಳೊಂದಿಗೆ ಕಾಂಗ್ರೆಸ್ ನಂಟು ಹೊಂದಿದೆ ಎಂದು ಸಿ.ಟಿ ರವಿ ಕೆಣಕಿದ್ದರು. ಈ ಹೇಳಿಕೆಗೆ ಕೆರಳಿ ಕೆಂಡವಾಗಿರುವ ಸಿದ್ದರಾಮಯ್ಯ, ಆರ್‌ಎಸ್‌ಎಸ್‌ಗೂ ಬಿಜೆಪಿಗೂ ಸಂಬಂಧವೇನು ವಿವರಿಸಿ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಸಿದ್ದರಾಮಯ್ಯ ಸುಧೀರ್ಘವಾಗಿ ಬರೆದುಕೊಂಡಿದ್ದಾರೆ.
ಸಿ.ಟಿ ರವಿ ಅವರೇ, ನಿಮ್ಮನ್ನು ರೈತನ ಮಗ ಎನ್ನುತ್ತೀರಿ, ನಾನು ಉಡುವ ರೈತ ಮಕ್ಕಳ ಪಂಚೆಯನ್ನು ಗೇಲಿ ಮಾಡುತ್ತೀರಿ. ನಿಮ್ಮ ತಂದೆ ಕೂಡಾ ಪಂಚೆ ಉಡುವವರು ಎಂದು ಅಂದುಕೊಳ್ತೀನಿ. ನಿಮ್ಮಂತಹ ಮಗನ ಬಗ್ಗೆ ಅವರೇನು ಅಂದುಕೊಳ್ಳಬಹುದು ಯೋಚಿಸಿದ್ದೀರಾ?
ಈ ರೀತಿ ನಾಲಿಗೆ ಸಡಿಲ ಬಿಟ್ಟು ಮನೆಗೆ ಹೋಗುವಾಗ ಹುಷಾರಾಗಿರಿ. ಕೊನೆಯದಾಗಿ ಸಿ.ಟಿ ರವಿ ಅವರೇ? ಕಣ್ಣಿಗೆ ಪೊರೆ ಬಂದವರು ಕತ್ತಲಲ್ಲಿ ಕಾರು ಚಲಾಯಿಸಬಾರದು, ಅಪಘಾತವಾಗಿ ಅಮಾಯಕರು ಜೀವ ಕಳೆದುಕೊಳ್ಳುತ್ತಾರೆ. ಪೊರೆ ಬಂದಿದ್ದರೆ ಕ್ಯಾಟಾರಕ್ಟ್ ಮಾಡಿಸಿಕೊಳ್ಳಿ. ಸಾರ್ವಜನಿಕರ ಜೀವ ಮುಖ್ಯ ಎಂದು ಕಾಲೆಳೆದಿದ್ದಾರೆ.
ಇದಿಷ್ಟೇ ಅಲ್ಲ. ಟ್ವಿಟರ್‌ನಲ್ಲಿಯೂ ವಾಗ್ದಾಳಿ ನಡೆಸಿರುವ "ಆರ್‌ಎಸ್‌ಎಸ್ ಎಂದ ಕೂಡಲೇ ಉರಿದುಬೀಳುವ ಸಿ.ಟಿ ರವಿ ಅವರೇ, ಆರ್‌ಎಸ್‌ಎಸ್ ಎಂದರೆ ಏನು? ಅದರ ಜೊತೆ ಬಿಜೆಪಿಯ ಸಂಬಂಧ ಏನು? ಆರ್‌ಎಸ್‌ಎಸ್ ಎಂದರೆ ಏನು ಸಾಮಾಜಿಕ ಸೇವಾ ಸಂಘಟನೆಯೇ? ಸಾರ್ವಜನಿಕ ದತ್ತಿಯೇ? ಇಲ್ಲವೇ ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ನಾಯಕರನ್ನು ಉತ್ಪಾದಿಸಿ ಕೊಡುವ ಕಾರ್ಖಾನೆಯೇ? ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
PublicNext
29/09/2021 11:05 am