ನವದೆಹಲಿ: ಭಾರತದ ಬಲಪಂಥೀಯ ಸಂಘಟನೆ ಹಾಗೂ ತಾಲಿಬಾನ್‌ಗಳ ನಡುವೆ ಹೋಲಿಕೆ ಮಾಡಿದ ಖ್ಯಾತ ಸಾಹಿತಿ ಹಾಗೂ ಚಿತ್ರ ಕಥೆಗಾರ ಜಾವೇದ್ ಅಕ್ತರ್ ಅವರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಹಾಗೂ ವಕ್ತಾರ ರಾಮ್ ಕದಂ, "ಜಾವೇದ್ ಅಖ್ತರ್ ಅವರು ಕೈಮುಗಿದು ಕ್ಷಮೆ ಯಾಚಿಸುವವರೆಗೂ ಅವರ ಯಾವುದೇ ಸಿನಿಮಾಗಳನ್ನು ಭಾರತದಲ್ಲಿ ಪ್ರದರ್ಶಿಸಲು ಬಿಡುವುದಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.
ಟ್ವಿಟರ್‌ನಲ್ಲಿ ವಿಡಿಯೋ ಪ್ರಕಟಿಸಿದ ಅವರು, "ಸಂಘಪರಿವಾರದೊಂದಿಗೆ ಸಂಪರ್ಕವಿರುವವರೇ ದೇಶವನ್ನು ಆಳುತ್ತಿದ್ದಾರೆ. ಒಂದು ವೇಳೆ ತಾಲಿಬಾನ್ ಸಿದ್ಧಾಂತ ಇಲ್ಲಿ ಅಸ್ತಿತ್ವದಲ್ಲಿರುತ್ತಿದ್ದರೆ ಅವರಿಗೆ ಅಂತಹಾ ಹೇಳಿಕೆಗಳು ನೀಡಲು ಸಾಧ್ಯವೇ? ಈ ಪ್ರಶ್ನೆಗಿರುವ ಉತ್ತರವೇ ಅವರ ಟೀಕೆಗಳು ಎಷ್ಟು ಪೊಳ್ಳಾಗಿದೆ ಎನ್ನುವುದನ್ನು ತೋರಿಸುತ್ತದೆ" ಎಂದು ಕದಂ ಹೇಳಿದ್ದಾರೆ.
ವಿಹೆಚ್‌ಪಿ ಮತ್ತು ಆರೆಸ್ಸೆಸ್‌ನ ಬೆಂಬಲಿಗರು ಆತ್ಮಾವಲೋಕನ ಮಾಡುವ ಸಮಯ ಬಂದಿದೆ ಎಂದು ಜಾವೇದ್ ಅಖ್ತರ್ ಮಾಧ್ಯಮವೊಂದರ ಸಂದರ್ಶನದಲ್ಲಿ ತಿಳಿಸಿದ್ದರು. "ಆರೆಸ್ಸೆಸ್, ವಿಹೆಚ್‌ಪಿ ಅಥವಾ ಬಜರಂಗದಳದಂತಹ ಸಂಘಟನೆಗಳನ್ನು ಬೆಂಬಲಿಸುವ ಜನರು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಸಹಜವಾಗಿ ತಾಲಿಬಾನ್ ಖಂಡನೀಯ. ಅವರು ಅನಾಗರಿಕರು. ಆದರೆ ನೀವು ಬೆಂಬಲಿಸುತ್ತಿರುವುದು ಯಾರನ್ನು? ಮತ್ತು ತಾಲಿಬಾನ್ ಗಳಿಂದ ಇವರು ಹೇಗೆ ಭಿನ್ನರಾಗಿದ್ದಾರೆ ಎಂದು ಜಾವೇದ್ ಅಖ್ತರ್ ಪ್ರಶ್ನಿಸಿದ್ದರು.
PublicNext
05/09/2021 04:28 pm