ಬೆಂಗಳೂರು: ರಾಜೀನಾಮೆ ಹೈಡ್ರಾಮಾ, ಒತ್ತಡಕ್ಕೆ ಸೊಪ್ಪು ಹಾಕಬೇಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಮಿ ಅವರಿಗೆ ಬಿಜೆಪಿ ಹೈಕಮಾಂಡ್ ಸಲಹೆ ನೀಡಿದೆ ಎಂಬ ಮಾಹಿತಿ ಲಭಿಸಿದೆ.
ಹೌದು. ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವ ಸಚಿವ ಆನಂದ್ ಸಿಂಗ್, ರಾಜೀನಾಮೆ ಅಸ್ತ್ರ ಪ್ರಯೋಗಿಸಿದ್ದಾರೆ. ಆದರೆ ಸಿಎಂ ಬೊಮ್ಮಾಯಿ ಅವರು, ಯಾವುದೇ ಒತ್ತಡಕ್ಕೂ ಸೊಪ್ಪು ಹಾಕಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಅವರು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜತೆ ಮಂಗಳವಾರ ದೂರವಾಣಿ ಮೂಲಕ ಮಾತನಾಡಿ, ಇಬ್ಬರು ಸಚಿವರ ಅಸಮಾಧಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಅರುಣ್ ಸಿಂಗ್, "ಅಸಮಾಧಾನ ಶಮನಗೊಳಿಸಿ ಆಡಳಿತಕ್ಕೆ ಚುರುಕು ನೀಡಿ. ಇಬ್ಬರು ಸಚಿವರನ್ನು ಕರೆಸಿ ಮಾತನಾಡಿ, ಸಮಸ್ಯೆ ಬಗೆಹರಿಸಿಕೊಳ್ಳಿ. ಖಾತೆ ಹಂಚಿಕೆ ಬದಲಾವಣೆ ನಿಮ್ಮ ವಿವೇಚನೆಗೆ ಬಿಟ್ಟದ್ದು, ಆದರೆ ಸಚಿವರ ಬೆದರಿಕೆ ತಂತ್ರಗಳಿಗೆ ಮಣಿಯಬೇಡಿ" ಎಂದು ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಇತ್ತ ಬಿಜೆಪಿ ಹಿರಿಯ ನಾಯಕರು ಮತ್ತು ಆರ್ಎಸ್ಎಸ್ ಕೂಡ, 'ಒತ್ತಡಕ್ಕೆ ಮಣಿದು ಖಾತೆ ಬದಲಾವಣೆ ಮಾಡಿದರೆ ಮತ್ತೊಬ್ಬರು ಖಾತೆ ಕ್ಯಾತೆ ತೆಗೆಯುತ್ತಾರೆ' ಎಂದು ಸಿಎಂ ಬೊಮ್ಮಾಯಿ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ.
PublicNext
11/08/2021 12:36 pm