ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ಅವರು ರಾಜೀನಾಮೆ ನಂತ್ರ, ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ್ದರು. ಈಗಾಗಲೇ ಸಚಿವ ಸಂಪುಟ ಕೂಡ ರಚನೆ ಮಾಡಲಾಗಿದೆ. ಸಚಿವರಿಗೆ ಖಾತೆ ಕೂಡ ಹಂಚಿಕೆ ಮಾಡಿದ್ದಾರೆ. ಈ ಬಳಿಕ, ತಮ್ಮನ್ನು ಸಿಎಂ ಪಟ್ಟಕ್ಕೇರಿಸಿದಂತ ಯಡಿಯೂರಪ್ಪ ಅವರಿಗೆ, ಸಂಪುಟ ದರ್ಜೆಯ ಸ್ಥಾನ ನೀಡಿ, ಸಿಎಂ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜೇಶ ಸೂಳಿಕೇರಿ ಅಧಿಸೂಚನೆ ಹೊರಡಿಸಿದ್ದಾರೆ. ಪದಾರೋಹಣ ಮಾಡಿದ ಮುಖ್ಯಮಂತ್ರಿಗಳ ಪದವಿಯ ಅವಧಿ ಇರುವವರೆಗೆ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಎಲ್ಲಾ ಸೌಲಭ್ಯವನ್ನು ಯಡಿಯೂರಪ್ಪ ಅವರಿಗೆ ನೀಡುವಂತೆ ಆದೇಶಿಸಿದ್ದಾರೆ.
ಇಂದು 29 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು. ಈ ಬಳಿಕ ಸಚಿವ ಆನಂದ್ ಸಿಂಗ್ ಹಾಗೂ ಎಂಟಿಬಿ ನಾಗರಾಜ್ ತಮಗೆ ಹಂಚಿಕೆ ಮಾಡಲಾಗಿರುವಂತ ಖಾತೆಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಖಾತೆ ಬದಲಿಸಿ ಕೊಡುವಂತೆಯೂ ಸಿಎಂ ಬಸವರಾಜ ಬೊಮ್ಮಾಯಿಗೆ ಒತ್ತಡ ಹಾಕಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಿ ಭರ್ಜರಿ ಗಿಫ್ಟ್ ನೀಡಿದ್ದಾರೆ.
PublicNext
07/08/2021 09:18 pm