ಬೆಂಗಳೂರು: 'ಪ್ಲೀಸ್ ನಮ್ಮ ಕೈಬಿಡ್ಬೇಡಿ ಸರ್' ಎಂದು ಸಚಿವ ಸ್ಥಾನದ ಆಕಾಂಕ್ಷಿಗಳು ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದಿದ್ದಾರೆ.
ಬಸವರಾಜ ಬೊಮ್ಮಾಯಿ ಅವರ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಆಕಾಂಕ್ಷಿತರು ಬಿ.ಎಸ್.ಯಡಿಯೂರಪ್ಪ ಅವರ ನಿವಾಸದ ಬಳಿ ಗಿರಕಿ ಹೊಡೆಯುತ್ತಲೇ ಇದ್ದರು. ಕಾವೇರಿ ನಿವಾಸ ರಾಜಕೀಯ ಕೇಂದ್ರಬಿಂದುವಾಗಿದ್ದು, ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಇಂದು ಬೆಳಗ್ಗೆಯಿಂದೇ ಮಾಜಿ ಸಚಿವರು, ಶಾಸಕರು ಆಗಮಿಸಿದರು.
ಯಡಿಯೂರಪ್ಪ ಅವರೇ ಸುಪ್ರೀಂ ಎಂದು ಭಾವಿಸಿರುವ ಶಾಸಕರು ಮತ್ತು ಮಾಜಿ ಸಚಿವರು ಸಚಿವ ಸಂಪುಟ ಸೇರಲು ಭಾರೀ ಲಾಭಿ ನಡೆಸುತ್ತಿದ್ದಾರೆ. ಒಬ್ಬೊಬ್ಬರಾಗಿ ಕಾವೇರಿಗೆ ಆಗಮಿಸಿದ ಕುಮಟಾ ಶಾಸಕ ದಿನಕರ್ ಶೆಟ್ಟಿ, ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ, ವಿರೂಪಾಕ್ಷಪ್ಪ ಬಳ್ಳಾರಿ, ತಿಪ್ಪಾರೆಡ್ಡಿ ಮಾತ್ರವಲ್ಲ, ಆರ್.ಅಶೋಕ್, ಬೈರತ್ತಿ ಬಸವರಾಜ್, ಪ್ರಭು ಚೌಹಾಣ್, ಗೋವಿಂದ ಕಾರಜೋಳ, ಡಾ.ಕೆ. ಸುಧಾಕರ್, ಭೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್ ಮತ್ತಿತರರು ಬಿಎಸ್ವೈ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಬಿಎಸ್ವೈ ಅವರಿಗೆ ಮನವಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
PublicNext
28/07/2021 12:55 pm