ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಅಬಾಧಿತ, ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೂ ಅವರದೇ ಸಾರಥ್ಯವೆಂದು ಭಾರತೀಯ ಜನತಾ ಪಕ್ಷದ ವರಿಷ್ಠರು ಘಂಟಾಘೋಷವಾಗಿ ಸಾರಿದ್ದಾರೆ. ಆ ಮೂಲಕ ಪರ್ಯಾಯ ನಾಯಕರನ್ನು ಶೋಧಿಸುತ್ತಿಲ್ಲ. ಒಡಕು ಧ್ವನಿಯನ್ನು ಸಹಿಸುವುದಿಲ್ಲ ಎಂಬ ಖಡಕ್ ಎಚ್ಚರಿಕೆಯ ಸಂದೇಶವನ್ನೂ ಸಾರಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೀಡಿದ ಈ ಹೇಳಿಕೆಗಳನ್ನು ಪ್ರಧಾನಿ ಮೋದಿ ಬೆಂಬಲಿಸಿದ್ದಾರೆ. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಬಿಎಸ್ವೈ ನೇತೃತ್ವ. ‘ನಮ್ಮದು ಡಬಲ್ ಇಂಜಿನ್ ಸರ್ಕಾರ’ವೆಂದು ಬೆಳಗಾವಿಯ ಬಹಿರಂಗ ಸಭೆಯಲ್ಲಿ ಅಮಿತ್ ಷಾ ಸಾರಿದ್ದೂ ಬಿಎಸ್ವೈಗೆ ಬಲ ತುಂಬಿದೆ.
ಜನತಾಪಕ್ಷದ ಹಿರಿಯ ನಾಯಕರೊಬ್ಬರು ಉದ್ಘಾರ ತೆಗೆದರು. ಆ ಮೂಲಕ ನಾಯಕತ್ವದ ಛಾಪು, ಛಾತಿಯನ್ನು ಬಿಚ್ಚಿಟ್ಟರು. ಹೋರಾಟದ ನೆಲೆಯಿಂದ ಬೆಳೆದ ಬಿಎಸ್ವೈ, ವೀರಶೈವ-ಲಿಂಗಾಯತರಿಗೆ ಮಾತ್ರ ಸೀಮಿತರಾಗದೆ ಎಲ್ಲ ವರ್ಗ, ಸಮುದಾಯಗಳ ಪ್ರೀತಿ-ವಿಶ್ವಾಸ ಗಿಟ್ಟಿಸಿಕೊಳ್ಳುವಲ್ಲಿ ಸಫಲವಾಗಿದ್ದಾರೆ ಎಂದು ಮುಕ್ತ ಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸುವುದನ್ನೂ ಅವರು ಮರೆಯಲಿಲ್ಲ.
ವರಿಷ್ಠರಿಂದ ಶಹಬ್ಬಾಸ್
ಮುಖ್ಯಮಂತ್ರಿಯಾಗಿ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕಾಲಿಗೆ ಚಕ್ರಕಟ್ಟಿಕೊಂಡು ಅತಿವೃಷ್ಟಿ, ಪ್ರವಾಹ ಪೀಡಿತ ಪ್ರದೇಶವನ್ನು ಯಡಿಯೂರಪ್ಪ ಸುತ್ತಿದರು. ಸಂತ್ರಸ್ತರ ನೋವಿಗೆ ಮಿಡಿದರು, ಅಧಿಕಾರಿಗಳ ಪಡೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ತುರ್ತು ತಾತ್ಕಾಲಿಕ ನಂತರ ದೀರ್ಘಾವಧಿ ಪರಿಹಾರ ಕಾರ್ಯಗಳತ್ತ ಚಿತ್ತ ನೆಟ್ಟರು. ಮೊದಲ ಹಂತದ ಮಂತ್ರಿ ಮಂಡಲ ವಿಸ್ತರಣೆ ವಿಳಂಬವನ್ನು ನಿಯಂತ್ರಣದ ಪ್ರಯತ್ನವೆಂಬ ವಿಶ್ಲೇಷಣೆ, ಸೋತ ಲಕ್ಷ್ಮಣ ಸವದಿಗೆ ಡಿಸಿಎಂ ಹುದ್ದೆ ಕಲ್ಪಿಸಿದಾಗ ಪರ್ಯಾಯ ನಾಯಕತ್ವದ ಚಿಂತನೆ ಎಂಬ ವ್ಯಾಖ್ಯಾನಗಳಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ತುಮಕೂರಿನ ಬಹಿರಂಗ ಸಮಾವೇಶದಲ್ಲಿ ಪ್ರಧಾನಿ ಮೋದಿಗೆ ಪ್ರವಾಹ ಪರಿಹಾರ ಕಾರ್ಯಗಳಿಗೆ ನೆರವು ಕೊಡಿ ಎಂದು ಕೇಳುವ ದಾಷ್ಟರ್್ಯತನ ತೋರಿಸಿದರು. ಈ ವೇಳೆ ಬಿಎಸ್ವೈ ರಾಜಕೀಯ ಭವಿಷ್ಯ ಮುಗಿಯಿತು ಎಂದವರೇ ಹೆಚ್ಚು. ಆದರೆ ಪ್ರವಾಹ, ನಂತರ ಕರೊನಾ ನಿರ್ವಹಿಸಿದ ರೀತಿಯನ್ನು ಪ್ರಧಾನಿ ಹಾಡಿ ಹೊಗಳಿ ಎಲ್ಲ ಸಂದೇಹಗಳಿಗೆ ತೆರೆ ಎಳೆದರು. ಕರೊನಾ ಸಂಕಷ್ಟದ ಅವಧಿಯಲ್ಲಿ ಬಿಎಸ್ವೈ ದೆಹಲಿಗೆ ತೆರಳಿದ್ದರು. ಪ್ರವಾಹ, ಕರೊನಾ ನೆರವಿನ ಜತೆಗೆ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯುವುದು ಮೂಲ ಉದ್ದೇಶ. ಇಳಿ ವಯಸ್ಸಿನಲ್ಲಿ ದಣಿವರಿಯದೆ ದುಡಿಯುತ್ತಿದ್ದೀರಿ ಎಂದು ಬಿಎಸ್ವೈ ಬಗ್ಗೆ ಕಕ್ಕುಲಾತಿ ತೋರಿದ ಮೋದಿ, ಯಾವುದಕ್ಕೂ ಚಿಂತಿಸಬೇಡಿ ಎಂದು ಬೆನ್ನುತಟ್ಟಿದ್ದರು. ಇಷ್ಟೇ ಅಲ್ಲ, ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಸಂಬಂಧಿಸಿದ ಸಲಹೆ-ಸೂಚನೆ, ಇದಕ್ಕಾಗಿ ಯಾವೆಲ್ಲ ತಜ್ಞರನ್ನು ಸಂಪರ್ಕಿಸಬಹುದು ಎನ್ನುವ ಮಾಹಿತಿಯನ್ನೂ ನೀಡಿ ಕಳುಹಿಸಿದ್ದರು.
ಸವಾಲುಗಳ ಸರಣಿ
ಅತ್ತ ಬರ, ಇತ್ತ ಪ್ರವಾಹ, ಬೆನ್ನಲ್ಲೇ ಕರೊನಾ ಸೋಂಕು ಮಾರಿ. ಸಾಲದೆಂಬಂತೆ ಸರ್ಕಾರ, ಪಕ್ಷದ ಒಳಗೂ ಆಗಾಗ್ಗೆ ಅಪಸ್ವರ… ಅಬ್ಬಬ್ಬಾ ಎಷ್ಟೆಲ್ಲ ಸವಾಲು, ಸತ್ವ ಪರೀಕ್ಷೆ! ಬೇರೆ ಯಾರಾದರೂ ಆಗಿದ್ದರೆ ಸಹವಾಸವೇ ಸಾಕು ಎಂದು ಬೆನ್ನು ತೋರಿಸುತ್ತಿದ್ದರು. ಆದರೆ ಪ್ರತಿ ಸವಾಲನ್ನು ಬಿಎಸ್ವೈ ಮೆಟ್ಟಿಲಾಗಿ ಪರಿವರ್ತಿಸಿಕೊಂಡರು. ಪಕ್ಷದ ಕೇಂದ್ರ ನಾಯಕರ ಒಲವು, ಜನರ ಅನುರಾಗ ಗಳಿಸಿಕೊಂಡು ನಾಯಕತ್ವಕ್ಕೆ ಹೊಸ ಹೊಳಪು ಕೊಟ್ಟ ಪರಿಯೇ ಅನನ್ಯ. ಈ ಮಾತಿಗೆ ಕಳೆದ ಒಂದೂವರೆ ವರ್ಷದ ವಿದ್ಯಮಾನ ಸಾಕ್ಷಿ.
ಮಾತು ತಪ್ಪದ ನಾಯಕ
ಸಚಿವ ಸಂಪುಟ ವಿಸ್ತರಣೆ, ಸಚಿವರಿಗೆ ಖಾತೆಗಳ ಹಂಚಿಕೆ ಮುಖ್ಯಮಂತ್ರಿಗೆ ವಿವೇಚನಾಧಿಕಾರ. ಅವರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎನ್ನುವುದು ರಾಜಕೀಯ ಪಕ್ಷಗಳ ಸಾಮಾನ್ಯ ಹೇಳಿಕೆ. ಆದರೆ ಬಿಎಸ್ವೈ ವಿಷಯದಲ್ಲಿ ವರಿಷ್ಠರು ಮಾತಲ್ಲ, ಕೃತಿಗೂ ಇಳಿಸಿದರು. ಎರಡು ಮತ್ತು 3ನೇ ಹಂತದ ವಿಸ್ತರಣೆ ತಡವಾದರೂ ಎಲ್ಲವೂ ಬಿಎಸ್ವೈ ಇಚ್ಛೆಯಂತೆ ನಡೆಯಿತು. ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣರಾದವರಿಗೆ ಸಚಿವ ಸ್ಥಾನ ಕಲ್ಪಿಸಿ, ಕೊಟ್ಟ ಮಾತು ತಪ್ಪದ ನಾಯಕ ಎಂಬುದನ್ನು ರುಜುವಾತುಪಡಿಸಿದರು. ಸಚಿವ ಸಂಪುಟಕ್ಕೆ ಸೇರ್ಪಡೆ ಹಾಗೂ ಖಾತೆಗಳ ಹಂಚಿಕೆ ವಿಷಯದಲ್ಲಿ ಯಾವುದೇ ಲಾಬಿ, ಒತ್ತಡ, ಓಲೈಕೆಗಳಿಗೆ ದೆಹಲಿ ನಾಯಕರು ಸೊಪು್ಪ ಹಾಕಲಿಲ್ಲ. ವಿಧಾನ ಪರಿಷತ್ಗೆ ಸದಸ್ಯರ ನೇಮಕ ವಿಚಾರವು ಯಡಿಯೂರಪ್ಪಗೆ ಮತ್ತೊಂದು ಪರೀಕ್ಷೆ ತಂದೊಡ್ಡಿತ್ತು. ಇಲ್ಲೂ ತೇರ್ಗಡೆಯಾಗಿ ವರಿಷ್ಠರ ಕೃಪಾಕಟಾಕ್ಷ ಎಷ್ಟಿದೆ ಎಂಬುದನ್ನು ತೋರಿಸಿಕೊಟ್ಟರು.
ಯಡಿಯೂರಪ್ಪ ಹೆಗಲಿಗೆ ಜವಾಬ್ದಾರಿ
ಆಡಳಿತ ಯಂತ್ರದ ಮೇಲೆ ಹಿಡಿತ, ಅಭಿವೃದ್ಧಿ ಕಾರ್ಯಗಳಿಗೆ ಚುರುಕುತನದ ಸ್ಪರ್ಶ, ಸಂಪುಟ ಸಹೋದ್ಯೋಗಿಗಳಿಂದ ಕೆಲಸ ತೆಗೆದುಕೊಳ್ಳುವ ರೀತಿ ದೆಹಲಿಗೆ ನಾಯಕರಿಗೆ ಹಿಡಿಸಿದೆ. ಆರ್ಥಿಕ ದುಃಸ್ಥಿತಿ ಮಧ್ಯೆ ಸರ್ಕಾರಿ ನೌಕರರ ವೇತನ ಕಡಿತಕ್ಕೆ ಕೈಹಾಕದೆ ಪರಿಸ್ಥಿತಿ ನಿಭಾಯಿಸುವಲ್ಲಿ ತೋರಿದ ಗಟ್ಟಿತನ ಮುಂತಾದ ಅಂಶಗಳನ್ನು ವರಿಷ್ಠರು ಅಳೆದು ತೂಗಿದ್ದಾರೆ. ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ, ಗ್ರಾಮ ಪಂಚಾಯಿತಿ ಚುನಾವಣೆ ಗೆಲುವಿನಲ್ಲಿ ಸಂಘಟನೆ, ಅಧಿಕಾರದ ಬಲ ಹಾಗೂ ಮೋದಿ-ಬಿಎಸ್ವೈ ವರ್ಚಸ್ಸು ಫಲ ನೀಡಿರುವ ಮಾಹಿತಿ ಪಡೆದಿದ್ದಾರೆ. ಇವೆಲ್ಲವುಗಳ ಆಧಾರದ ಮೇಲೆ ಮುಂದಿನ ಸಾರ್ವತ್ರಿಕ ಚುನಾವಣೆ ನೇತೃತ್ವವನ್ನು ಬಿಎಸ್ವೈಗೆ ಒಪ್ಪಿಸಲು ಉತ್ಸುಕರಾಗಿದ್ದು, ಈ ವಿಚಾರದಲ್ಲಿ ಅಮಿತ್ ಷಾ, ಅರುಣ್ ಸಿಂಗ್ ನಿಲುವು ಸ್ಪಷ್ಟ ಮತ್ತು ಸ್ಪುಟವಾಗಿವೆ. ಇದೇ ಕಾರಣಕ್ಕೆ ಏನೇ ಇದ್ದರೂ ಮುಖ್ಯಮಂತ್ರಿ ಬಳಿ ನಿವೇದಿಸಿಕೊಂಡು ಬಗೆಹರಿಸಿಕೊಳ್ಳಿರಿ, ಪಕ್ಷದ ವೇದಿಕೆಯೊಳಗೆ ರ್ಚಚಿಸಿರಿ ಎಂದು ಶಾಸಕರಿಗೆ ವರಿಷ್ಠರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೃಪೆ: ವಿಜಯವಾಣಿ
PublicNext
27/02/2021 03:49 pm