ಕೊಪ್ಪಳ: ಗಣರಾಜ್ಯೋತ್ಸವದ ದಿನ ರೈತರ ಹೆಸರಲ್ಲಿ ಹೋರಾಟದಲ್ಲಿರುವವರು ಭಯೋತ್ಪಾದಕರು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸದಿಲ್ಲಿಯಲ್ಲಿ ಹೋರಾಟ ಮಾಡುತ್ತಿರುವ ಎಲ್ಲರೂ ಭಯೋತ್ಪಾದಕರು. ಬೇರೆ ಬೇರೆ ದೇಶಗಳ ಹಿನ್ನೆಲೆ ಹೊಂದಿದ್ದಾರೆ. ಅವರಿಗೆ ಕಾಂಗ್ರೆಸ್ ಬೆಂಬಲವಿದೆ. ರೈತರ ಪ್ರತಿಭಟನೆ ಎಂದಿಗೂ ಖಂಡನೆ ಎನಿಸುವುದಿಲ್ಲ. ಇತಿಹಾಸದಲ್ಲಿ ಇದುವರೆಗೆ ರೈತರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡಿಲ್ಲ. ಹೊಸದಿಲ್ಲಿಯ ಗಲಾಟೆಯ ಹಿಂದೆ ಭಯೋತ್ಪಾದಕರಿದ್ದಾರೆ. ಖಲಿಸ್ತಾನದವರಿದ್ದಾರೆ. ಕಾಂಗ್ರೆಸ್ ಪಕ್ಷದವರಿದ್ದಾರೆ. ಮೋದಿ ಅವರ ಜನಪ್ರಿಯತೆ ಸಹಿಸದವರು ಹಾಗೂ ಮೋದಿ ಸರಕಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಹತಾಶರಾದವರು ಭಯೋತ್ಪಾದಕರಿಗೆ ರೈತರ ಹೆಸರಿಟ್ಟು ಭಯೋತ್ಪಾದನೆ ನಡೆಸಿದ್ದಾರೆ ಎಂದು ಟೀಕಿಸಿದರು.
ಕೆಂಪು ಕೋಟೆಗೆ ತನ್ನದೇ ಸಂವಿಧಾನಿಕ ಗೌರವವಿದೆ. ಕೆಂಪು ಕೋಟೆ ಬಳಿ ರೈತರ ಹೆಸರಿನಲ್ಲಿ ಬಾವುಟ ಹಾರಿಸುವುದು ಭಯೋತ್ಪಾದಕರ ಕೆಲಸವಾಗಿದೆ. ಚೀನಾದ ಗಡಿಯಲ್ಲಿ ಸೈನಿಕರ ಮೇಲೂ ರೈತರ ಹೆಸರಿನಲ್ಲಿ ದಾಳಿ ನಡೆಸಲು ಇಂಥವರು ಹೇಸುವುದಿಲ್ಲ. ರೈತರ ಹೆಸರಿನಲ್ಲಿ ಹೋರಾಟ ಸಂಘಟಿಸಿ ಕಾಂಗ್ರೆಸ್ ಕಾರ್ಯಕರ್ತರೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿಕೆ ನೀಡಿದ್ದೇ ಇದಕ್ಕೆ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ, ಭೂ ಸುಧಾರಣೆ ಕಾನೂನು ಸರಿಯಾಗಿಲ್ಲ ಎಂದು ನಿಜವಾದ ಒಬ್ಬ ರೈತರು ಹೇಳಿಲ್ಲ. ಕೊಪ್ಪಳದಲ್ಲಿ ರೈತರೇ ತಮ್ಮ ಮಾರುಕಟ್ಟೆ ಸೃಷ್ಟಿಸಿ ಕೃಷಿ ಉತ್ಪನ್ನ ಮಾರಾಟ ಮಾಡುತ್ತಿದ್ದಾರೆ. ಇವರೇ ನಿಜವಾದ ರೈತರು. ನಾವು ರೈತರ ಮಧ್ಯೆಯೇ ಇದ್ದೇವೆ. ನಿಜವಾದ ರೈತರು ಯಾರೂ ಹೋರಾಟ ಮಾಡುತ್ತಿಲ್ಲ ಎಂದು ಹೇಳಿದರು.
PublicNext
27/01/2021 07:44 am