ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ
ಹುಬ್ಬಳ್ಳಿ : ಮಂತ್ರಿ ಸ್ಥಾನ ನೀಡುವ ಮೂಲಕ ಕೊನೆಗೂ ಯಡಿಯೂರಪ್ಪನವರು ವಲಸಿಗ ಶಾಸಕರಿಂದ ಋಣಮುಕ್ತರಾಗಿದ್ದಾರೆ. ಆದರೆ ಸೆರಗಿನ ಕೆಂಡದಂತಿರುವ ಎಚ್. ವಿಶ್ವನಾಥ ಹಾಗೂ ಬಸನಗೌಡ ಯತ್ನಾಳ ಹೊಡೆತಕ್ಕೆ ಬಿಜೆಪಿ ತತ್ತರಿಸಿರುವುದರಲ್ಲಿ ಸಂಶಯವಿಲ್ಲ.
ಫೈರ್ ಬ್ರ್ಯಾಂಡ್ ಯತ್ನಾಳ ಎಂದಿಗಿಂತಲೂ ಉಗ್ರರಾಗಿದ್ದಾರೆ, ವ್ಯಗ್ರರಾಗಿದ್ದಾರೆ. ಯಡಿಯೂರಪ್ಪ ಬ್ಲ್ಯಾಕ್ ಮೇಲ್ಗೆ ಒಳಗಾಗಿದ್ದಾರೆ, ಹಿರಿಯ ತಲೆಗಳನ್ನು ಕಡೆಗಣಿಸಿದ್ದಾರೆ ಎಂದು ನೇರ ವಾಗ್ದಾಳಿ ನಡೆಸಿದ್ದಾರೆ. ಎಚ್. ವಿಶ್ವನಾಥ ಅವರಂತೂ, ಯಡಿಯೂರಪ್ಪನವರು ನಮ್ಮ ಭಿಕ್ಷೆಯಿಂದ ಅಧಿಕಾರಕ್ಕೆ ಬಂದಿದ್ದಾರೆ. ಚುನಾವಣೆಯಲ್ಲಿ ಸೋತ ಯೋಗೀಶ್ವರ್ ಬ್ಲ್ಯಾಕ್ ಮೇಲ್ ಮಾಡುತ್ತಲೇ ಮಂತ್ರಿಯಾಗಿದ್ದಾರೆ. ಕಾದು ನೋಡಿ ನಾವೂ ಸಿ.ಡಿ ಬಿಡುಗಡೆ ಮಾಡುತ್ತೇವೆ ಎಂದು ಬೆದರಿಕೆ ಸಹ ಹಾಕಿದ್ದಾರೆ.
ಅದೇನೇ ಇರಲಿ, ಬೆಳಗಾವಿ ಜಿಲ್ಲೆಗೆ ಐದು ಮಂತ್ರಿ ಸ್ಥಾನ ಸಿಕ್ಕಿದೆ ಎಂದು ಹಳೆ ಮೈಸೂರಿನವರು ಹೊಟ್ಟೆ ಉರಿದುಕೊಂಡು ಹೇಳುತ್ತಿದ್ದಾರೆ. ಏಕೆ ಹಿಂದಿನಿಂದಲೂ ಉತ್ತರ ಕರ್ನಾಟಕ್ಕೆ ಅದರಲ್ಲೂ ಬೆಳಗಾವಿ, ಧಾರವಾಡ ಜಿಲ್ಲೆಗೆ ಅನ್ಯಾಯವಾಗುತ್ತಲೆ ಬಂದಿದೆ. ಪಕ್ಷ ಯಾವುದೇ ಇರಲಿ ಈ ಬೆಂಗಳೂರು, ಮೈಸೂರಿನವರು ವಿದಾನಸೌಧವನ್ನೇ ಹೈಜಾಕ್ ಮಾಡಿದ ಉದಾಹರಣೆಗಳಿಲ್ಲವೆ?
ಸ್ವಪಕ್ಷೀಯರು, ವಲಸಿಗರು ಹೀಗೆ ಎಲ್ಲರ ವಿರೋಧ ಕಟ್ಟಿಕೊಂಡು ಮುಖ್ಯಮಂತ್ರಿ ಬಿಎಸ್ವೈ ಬೆಳಗಾವಿಗೆ ಹೆಚ್ಚು ಮಂತ್ರಿ ಸ್ಥಾನ ಕೊಟ್ಟಿದುದರ ಹಿಂದೆ ಪಕ್ಷದ ಸ್ವಾರ್ಥವಿದೆ. ಮುಂಬರುವ ಬೆಳಗಾವಿ ಲೋಕಸಭಾ ಉಪಚುನಾವಣೆಯನ್ನು ಶತಾಯಗತಾಯ ಗೆಲ್ಲಲೇ ಬೇಕಾಗಿದೆ. ರೇಲ್ವೆ ಮಂತ್ರಿಯಾಗಿದ್ದ ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಯಾವುದೇ ಸಮಯದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಸಚಿವ ಲಕ್ಷಣ ಸವದಿ, ರಮೇಶಜಾರಕಿಹೊಳಿ, ಶಶಿಕಲಾ ಜೊಲ್ಲೆ ಹಾಗೂ ಶ್ರೀಮಂತ ಪಾಟೀಲ ಅವರೊಂದಿಗೆ ಈಗ ಉಮೇಶ ಕತ್ತಿ ಸೇರಿದ್ದಾರೆ.
ದಿ. ಸುರೇಶ ಅಂಗಡಿ ಅವರು ಚಾಣಾಕ್ಷರಾಗಿದ್ದರು, 2004 ರಿಂದ ನಾಲ್ಕು ಬಾರಿ ಸತತವಾಗಿ ಲೋಕಸಭೆಗೆ ಆಯ್ಕೆಯಾಗಿದ್ದ ಅಂಗಡಿ ಅವರು ರಾಜಕೀಯದ ಎಲ್ಲ ಪಟ್ಟುಗಳನ್ನು ಬಲವರಾಗಿದ್ದರು. ಗಡಿ ಪ್ರದೇಶದಲ್ಲಿ ಮರಾಠಿಗರ ಪ್ರಾಬಲ್ಯವಿರುವುದರಿಂದ ಎಂದೂ ಅವರು ಮರಾಠಿಗರನ್ನು ನೇರವಾಗಿ ಎದುರು ಹಾಕಿಕೊಂಡವರಲ್ಲ. ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದವರು.
ಈಗ ಬಿಜೆಪಿಯಿಂದ ಯಾರೇ ಕಣಕ್ಕಿಳಿದರೂ ಗೆಲವು ಅಷ್ಟು ಸುಲಭವಾಗದು. ಹೀಗಾಗಿ ಮತದಾರರನ್ನು ಓಲೈಸಲು ಬೆಳಗಾವಿ ಜಿಲ್ಲೆಗೆ ಐದು ಮಂತ್ರಿ ಸ್ಥಾನ ನೀಡಿದ್ದರೂ ಆಶ್ಚರ್ಯವೇನಿಲ್ಲ.
ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯವಿದೆ. ಹೀಗಾಗಿ ನಾಲ್ವರು ಶಾಸಕರು ಐವರು ಸಚಿವರ ಪ್ರಯತ್ನದಿಂದ ಬೆಳಗಾಗಿ ಕ್ಷೇತ್ರವನ್ನು ಉಳಿಸಿಕೊಳ್ಳಬಹುದೆಂಬ ಲೆಕ್ಕಾಚಾರವೂ ಬಿಜೆಪಿ ನಾಯಕರಿಗೆ ಇರಬಹುದು. ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಅವರ ಪತಿ ಹಾಗೂ ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಗಡಿ ಭಾಗದ ಮರಾಠಿಗರ ಮನ ಗೆದ್ದವರು. ಇದೂ ಸಹ ಬಿಜಪಿಗೆ ಪ್ಲಸ್ ಪಾಯಿಂಟ್.
ಆದರೆ ಬಿಜೆಪಿ ಈ ತಂತ್ರ ಎಷ್ಟರ ಮಟ್ಟಿಗೆ ಕೈಗೂಡವುದೋ ಕಾಲವೇ ಉತ್ತರಿಸಬೇಕು.
PublicNext
14/01/2021 12:37 pm