ಭೋಪಾಲ್: ಅಖಿಲ ಭಾರತ ಹಿಂದೂ ಮಹಾಸಭಾ ತನ್ನ ಗ್ವಾಲಿಯರ್ ಕಚೇರಿಯಲ್ಲಿ ಮಹಾತ್ಮಾ ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆ ಅಧ್ಯಯನ ಕೇಂದ್ರವನ್ನು ಆರಂಭಿಸಿದೆ.
ಮಧ್ಯಪ್ರದೇಶದ ಗ್ವಾಲಿಯರ್‌ನ ದೌಲತ್‌ಗಂಜ್‌ನಲ್ಲಿರುವ ಹಿಂದೂ ಮಹಾಸಭಾ ಕೇಂದ್ರ ಕಚೇರಿಯಲ್ಲಿ ಗ್ರಂಥಾಲಯವನ್ನು ಹೋಲುವ ಗೋಡ್ಸೆ ಜ್ಞಾನ ಶಾಲಾವನ್ನು ಆರಂಭಿಸಿಲಾಗಿದೆ. ನಾಥೂರಾಂ ಗೋಡ್ಸೆ ಭಾವಚಿತ್ರಕ್ಕೆ ಮತ್ತು ಗೋಡ್ಸೆಗೆ ಪ್ರೇರಣೆ ನೀಡಿದ ಮುಖಂಡರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಜ್ಞಾನ ಶಾಲಾವನ್ನು ಉದ್ಘಾಟಿಸಲಾಯಿತು.
ಗುರುಗೋವಿಂದ್ ಸಿಂಗ್, ಮಹಾರಾಣಾ ಪ್ರತಾಪ್, ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ. ಹೆಡಗೇವಾರ್, ಲಾಲಾ ಲಜಪತ್‌ರಾಯ್, ಪಂಡಿತ್ ಮದನ್ ಮೋಹನ್ ಮಾಳವೀಯ, ನಾರಾಯಣ ಆಪ್ಟೆ, ಶ್ಯಾಮ್‌ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಬೆಳವಣಿಗೆಯನ್ನು ಖಂಡಿಸಿರುವ ಗ್ವಾಲಿಯರ್ ಕಾಂಗ್ರೆಸ್ ಶಾಸಕ ಡಾ.ಗೋವಿಂದ್ ಸಿಂಗ್, "ರಾಜ್ಯದ ಬಿಜೆಪಿ ಸರ್ಕಾರ ಗಾಂಧಿ ಹಂತಕರಿಂದ ಸ್ಫೂರ್ತಿ ಪಡೆದು ಧೈರ್ಯಶಾಲಿಯಾಗಿದೆ. ರಾಜ್ಯದಲ್ಲಿ ಮಾಫಿಯಾ ಧ್ವಂಸ ಕಾರ್ಯಾಚರಣೆ ಬಗ್ಗೆ ಹೇಳಿಕೊಳ್ಳುತ್ತಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಗಾಂಧಿ ಹಂತಕರ ವೈಭವೀಕರಣವನ್ನು ಹೇಗೆ ಸಹಿಸಿಕೊಳ್ಳುತ್ತಾರೆ'' ಎಂದು ಪ್ರಶ್ನಿಸಿದ್ದಾರೆ.
PublicNext
11/01/2021 11:50 am