ಬೆಳಗಾವಿ: ಡೆಡ್ಲಿ ಕೊರೊನಾ ಸೋಂಕಿನಿಂದ ಅಕಾಲಿಕ ಮರಣ ಹೊಂದಿದ ಬೆಳಗಾವಿ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಸುರೇಶ ಅಂಗಡಿಯವರಿಂದ ತೆರವಾಗಿರುವ ಸ್ಥಾನಕ್ಕೆ ಎದುರಾಗುವ ಉಪ ಚುನಾವಣೆಗೆ ಅಭ್ಯರ್ಥಿಗಳು ಯಾರಾಗಬಹುದು ಎನ್ನುವ ಚರ್ಚೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಆರಂಭವಾಗಿದೆ.
2004ರಿಂದ ಒಟ್ಟು 4 ಚುನಾವಣೆಗಳಲ್ಲಿ ಸತತವಾಗಿ ಜಯ ಗಳಿಸಿದ್ದ ಅಂಗಡಿಯವರು ಕ್ಷೇತ್ರದ ಬಿಜೆಪಿ ಭದ್ರಕೋಟೆಯಾಗಿದ್ದರು.
ಪ್ರಬಲ ಹಿಡಿತ ಹೊಂದಿದ್ದ ಅಂಗಡಿ ಅವರ ಹಠಾತ್ ನಿಧನದಿಂದ ಬಿಜೆಪಿ ವಲಯದಲ್ಲಿ ಆಘಾತ ಉಂಟಾಗಿದೆ.
ಹೀಗಾಗಿ, ಉತ್ತರಾಧಿಕಾರಿ ಯಾರಾಗುತ್ತಾರೆ ಎನ್ನುವ ಕುತೂಹಲ ಜನರದಾಗಿದೆ.
ಈಗ ಅಂಗಡಿ ಅವರ ಧಿಡೀರ್ ನಿರ್ಗಮನ ಕ್ಷೇತ್ರದಲ್ಲಿ ನಿರ್ವಾತ ಸೃಷ್ಟಿಸಿದೆ.
ಅನಿರೀಕ್ಷಿತ ಬೆಳವಣಿಗೆ ಉಂಟಾಗಿದ್ದರಿಂದಾಗಿ, ಬಲಿಷ್ಠ ಅಭ್ಯರ್ಥಿಗಾಗಿ ಹುಡುಕಾಟ ನಡೆಸಬೇಕಾದ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ.
ಅಂಗಡಿ ಪತ್ನಿ ಮಂಗಳಾ ಸೇರಿ ಕುಟುಂಬದಲ್ಲಿ ರಾಜಕೀಯ ಹಿನ್ನೆಲೆಯವರು ಯಾರೂ ಇಲ್ಲ.
ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡವರಿಲ್ಲ. ಹೀಗಾಗಿ, ಅನುಕಂಪದ ಆಧಾರದ ಮೇಲೆ ಟಿಕೆಟ್ ನೀಡಲಾಗುವುದೇ, ಅಚ್ಚರಿಯ ಅಭ್ಯರ್ಥಿಗೆ ಅವಕಾಶ ಸಿಗುವುದೇ ಮಾತುಗಳು ಕೇಳಿಬರುತ್ತಿದೆ.
ಎಲ್ಲದಕ್ಕೂ ಕಾಲವೇ ಉತ್ತರಿಸಲಿದ್ದು ಕಾದು ನೋಡುವುದಷ್ಟೇ ನಮ್ಮ ಕೆಲಸವಾಗಿದೆ.
PublicNext
26/09/2020 08:16 am