ನವದೆಹಲಿ: ಗೋವಾದ ರೆಸ್ಟೋರೆಂಟ್‌ಗೆ ಸಂಬಂಧಿಸಿದಂತೆ ಬಿಜೆಪಿಯ ಸ್ಮೃತಿ ಇರಾನಿ ಮತ್ತು ಅವರ ಮಗಳ ವಿರುದ್ಧದ ಆರೋಪ ಮಾಡಿ, ಪೋಸ್ಟ್ ಮಾಡಿರುವ ಟ್ವೀಟ್‌ಗಳನ್ನು 24 ಗಂಟೆಗಳ ಒಳಗೆ ಡಿಲೀಟ್ ಮಾಡುವಂತೆ ಮೂವರು ಕಾಂಗ್ರೆಸ್ ನಾಯಕರಿಗೆ ಆದೇಶ ನೀಡಲಾಗಿದೆ. ಕೇಂದ್ರ ಸಚಿವರ ವಿರುದ್ಧ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ನಾಯಕರಿಗೆ ಸಮನ್ಸ್ ನೀಡಿತ್ತು.
ಸ್ಮೃತಿ ಇರಾನಿ ಅವರ 18 ವರ್ಷದ ಮಗಳು ಗೋವಾದಲ್ಲಿ "ಅಕ್ರಮ ಬಾರ್" ನಡೆಸುತ್ತಿದ್ದಾಳೆ ಎಂಬ ಆರೋಪದ ಮೂಲಕ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದ್ದರು. ಕಳೆದ ವಾರ ಕೇಂದ್ರ ಸಚಿವರು ಮೂವರು ಕಾಂಗ್ರೆಸ್ ನಾಯಕರು ಮತ್ತು ಅವರ ಪಕ್ಷಕ್ಕೆ ಲೀಗಲ್ ನೋಟೀಸ್ ಕಳುಹಿಸಿದ್ದಾರೆ. ಅವರು ಲಿಖಿತ ಬೇಷರತ್ ಕ್ಷಮೆಯಾಚಿಸಲು ಮತ್ತು ತಮ್ಮ ಮಗಳ ಮೇಲಿನ ಆರೋಪಗಳನ್ನು ತಕ್ಷಣವೇ ಹಿಂಪಡೆಯುವಂತೆ ಕೋರಿದ್ದರು.
ತಮ್ಮ ಮಗಳ ವಿರುದ್ಧ ಅಕ್ರಮ ಆರೋಪ ಕೇಳಿ ಕೆರಳಿದ್ದ ಸಚಿವೆ, ಎಲ್ಲರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದರು. ಅದರಂತೆಯೇ ಅವರು, ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ ಇದೀಗ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಪವನ್ ಖೇರಾ ಮತ್ತು ನೆಟ್ಟಾ ಡಿಸೋಜಾ ಅವರಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ಸಮನ್ಸ್ ಜಾರಿ ಮಾಡಿದೆ.
ರೆಸ್ಟೋರೆಂಟ್ ನಡೆಸಲು ಮಾತ್ರ ಪರವಾನಗಿ ಇದೆ. ಆದರೆ ಇರಾನಿ ಅವರ ಮಗಳು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿದ್ದಾರೆ. ವಿದೇಶಿ, ಭಾರತ ನಿರ್ಮಿತ ವಿದೇಶಿ ಮತ್ತು ದೇಶದ ಮದ್ಯವನ್ನು ಪೂರೈಸಲು ಕಳೆದ ವರ್ಷ ಫೆಬ್ರವರಿಯಲ್ಲಿ ಪರವಾನಗಿಗಳನ್ನು ಸತ್ತ ವ್ಯಕ್ತಿಯ ಹೆಸರಲ್ಲಿ ಪಡೆಯದಿದ್ದಾರೆ. ಕಳೆದ ತಿಂಗಳು ಪರವಾನಗಿಗಳನ್ನು ನವೀಕರಿಸಿದ್ದಾಳೆ ಎನ್ನುವುದು ಕಾಂಗ್ರೆಸ್ ಆರೋಪ. ಜುಲೈ 29ರಂದು ಅಬಕಾರಿ ಆಯುಕ್ತ ನಾರಾಯಣ್ ಎಂ ಗಡ್ ಅವರು ಬಾರ್ಗೆ ಶೋಕಾಸ್ ನೋಟಿಸ್ ನೀಡಿದ್ದರು. ಆದರೆ ಸ್ಮೃತಿ ಅವರು ತಮ್ಮ ರಾಜಕೀಯ ಪ್ರಭಾವ ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ್ದ ಸಚಿವೆ ಸ್ಕೃತಿ ಇರಾನಿ, ತಮ್ಮ ಮಗಳು ಯಾವುದೇ ಬಾರ್ ನಡೆಸುತ್ತಿಲ್ಲ. ಆಕೆ ವಿದ್ಯಾರ್ಥಿಯಷ್ಟೇ ಎಂದು ಸ್ಪಷ್ಟನೆ ನೀಡಿದ್ದರು. ಜತೆಗೆ ಎಲ್ಲರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದರು. ಅದರಂತೆ ಅವರು ದಾವೆ ಹೂಡಿದ್ದಾರೆ.
PublicNext
29/07/2022 04:58 pm