ಲಕ್ನೋ: ಕಳ್ಳತನ ಪ್ರಕರಣವೊಂದರಲ್ಲಿ ಅರೆಸ್ಟ್ ಆಗಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಆಗ್ರಾದ ಕಾರ್ಮಿಕನ ಕುಟುಂಬವನ್ನು ಭೇಟಿ ಮಾಡಲು ತೆರಳುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಯುಪಿ ಪೊಲೀಸರು ತಡೆದಿದ್ದಾರೆ..
ವ್ಯಕ್ತಿಯ ಸಾವಿನ ನಂತರ ಯಾವುದೇ ರಾಜಕೀಯ ವ್ಯಕ್ತಿಗೆ ಅಲ್ಲಿಗೆ ಹೋಗಲು ಅವಕಾಶ ನೀಡದಂತೆ ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಮನವಿ ಮಾಡಿದ್ದರಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ಲಕ್ನೋ-ಆಗ್ರಾ ಎಕ್ಸ್ ಪ್ರೆಸ್ ವೇಯಲ್ಲಿ ತಡೆದಿದ್ದಾರೆ.
25 ಲಕ್ಷ ಕಳ್ಳತನ ಮಾಡಿದ ಆರೋಪದಲ್ಲಿ ಅರುಣ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧನ ಮಾಡಿದ್ದರು. ಆದರೆ ಆ ವ್ಯಕ್ತಿಯು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾದ ವ್ಯಕ್ತಿಯ ಕುಟುಂಬವನ್ನು ಭೇಟಿಯಾಗಲು ಪ್ರಿಯಾಂಕಾ ಹೊರಟಿದ್ದರು.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿಗಳು, "ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬಳಿ ಯಾವುದೇ ಅನುಮತಿ ಪತ್ರ ಇಲ್ಲದ ಕಾರಣ ನಾವು ತಡೆದಿದ್ದೇವೆ," ಎಂದು ತಿಳಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಪ್ರಿಯಾಂಕಾ ವಾದ್ರಾ, "ಪೊಲೀಸ್ ಕಸ್ಡಡಿಯಲ್ಲಿ ಅರುಣ್ ವಾಲ್ಮೀಕಿಯ ಸಾವು ಸಂಭವಿಸಿದೆ. ಅರುಣ್ ನ ಕುಟುಂಬ ನ್ಯಾಯ ಬಯಸಿದೆ. ನಾನು ಆ ಕುಟುಂಬವನ್ನು ಭೇಟಿಯಾಗಲು ತೆರಳುತ್ತಿದ್ದೆ. ಆದರೆ ಉತ್ತರ ಪ್ರದೇಶ ಸರ್ಕಾರಕ್ಕೆ ಇದರಲ್ಲಿ ಯಾಕೆ ಭಯ?. ನನ್ನನ್ನು ಯಾಕೆ ತಡೆಯಲಾಗಿದೆ," ಎಂದು ಪ್ರಶ್ನೆ ಮಾಡಿದ್ದಾರೆ.
PublicNext
20/10/2021 04:30 pm