ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಣೇಶೋತ್ಸವಕ್ಕೆ ಹಿಂದೂ ವ್ಯಾಪಾರಿಗಳ ಬಳಿಯೇ ವ್ಯಾಪಾರ ಮಾಡಿ: ಮುತಾಲಿಕ್ ಕರೆ

ದೇಶದಲ್ಲಿ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಗಣೇಶೋತ್ಸವಕ್ಕೆ ಎಲ್ಲ ಹಿಂದೂಗಳು ಹಿಂದೂ ವ್ಯಾಪಾರಿಗಳ ಬಳಿಯೇ ವ್ಯಾಪಾರ ಮಾಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಕರೆ ನೀಡಿದ್ದಾರೆ.

ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶೋತ್ಸವ ಮಂಡಳಿಯವರು ಹಾಗೂ ಎಲ್ಲ ಹಿಂದೂಗಳು ಗಣೇಶೋತ್ಸವಕ್ಕೆ ಬೇಕಾದ ಹಣ್ಣು, ಬಟ್ಟೆ, ಪೆಂಡಾಲ್, ಧ್ವನಿವರ್ಧಕ ಸೇರಿದಂತೆ ಇತ್ಯಾದಿ ವಸ್ತುಗಳನ್ನು ಹಿಂದೂ ವ್ಯಾಪಾರಿಗಳ ಬಳಿಯೇ ಖರೀದಿ ಮಾಡಬೇಕು ಎಂದು ಮುತಾಲಿಕ್ ಕರೆ ಕೊಟ್ಟರು.

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರದಿಂದ ಬಹಳಷ್ಟು ಕಿರಿಕಿರಿಯಾಗುತ್ತಿದೆ. ಪ್ರತಿಯೊಂದಕ್ಕೂ ಪರವಾನಿಗಿ ನೆಪವೊಡ್ಡುತ್ತಿದೆ. ಎಲ್ಲದಕ್ಕೂ ನಿರ್ಬಂಧ ಹೇರಲಾಗುತ್ತಿದೆ. ವಿದ್ಯುತ್, ಪೆಂಡಾಲ್, ಧ್ವನಿವರ್ಧಕ, ಮಹಾನಗರ ಪಾಲಿಕೆ, ಅಗ್ನಿಶಾಮಕ ದಳದ ಪರವಾನಿಗಿ ಹೀಗೆ ಎಲ್ಲ ಕಡೆ ಪರವಾನಿಗಿ ಪಡೆದುಕೊಳ್ಳಬೇಕು ಎಂದು ಕಿರಿಕಿರಿ ಮಾಡಲಾಗುತ್ತಿದೆ. ಪೊಲೀಸರಂತೂ ಯುವಕ ಮಂಡಳಿಯವರಿಗೆ ಹಿಂಸೆ ಮಾಡುತ್ತಿದ್ದಾರೆ. ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲು ನಮಗೆ ಸ್ವಾತಂತ್ರ್ಯ ಇಲ್ಲವೇ? ಸರ್ಕಾರದ ಈ ನೀತಿಯನ್ನು ನಾನು ವಿರೋಧಿಸುತ್ತೇನೆ ಎಂದರು.

ಸರ್ಕಾರ ಈ ನೀತಿಯನ್ನು ಕೈ ಬಿಡದೇ ಹೋದಲ್ಲಿ ದೊಡ್ಡಮಟ್ಟದ ಆಂದೋಲನ ಮಾಡಬೇಕಾಗುತ್ತದೆ. ಈ ಎಲ್ಲ ಪರವಾನಿಗಿ ತೆಗೆದುಕೊಳ್ಳಲೇಬೇಕು ಎಂದರೆ ಒಂದೇ ಕಡೆ ಕೌಂಟರ್ ಮಾಡಬೇಕು. ನಿಮಗೆ ಏನು ಬೇಕೋ ಅದನ್ನು ನಾವು ಕೊಡುತ್ತೇವೆ. ಅಲ್ಲೇ ನಮಗೆ ಪರವಾನಿಗಿ ನೀಡಬೇಕು. ಅಲೆದಾಡಿಸುವ ವ್ಯವಸ್ಥೆ ಕೈಬಿಡಬೇಕು. ಕಾಂಗ್ರೆಸ್‌ನವರೂ ಹೀಗೆ ಮಾಡಿದ್ದರು. ಈಗ ಬಿಜೆಪಿಯವರೂ ಇದೇ ನೀತಿ ಅನುಸರಿಸುತ್ತಿದ್ದಾರೆ ಎಂದರು.

ಡಿಜೆ ಹಚ್ಚಬಾರದು ಎಂಬುದಕ್ಕೆ ನಮ್ಮ ಸಹಮತವೂ ಇದೆ. ಆದರೆ, ಮೈಕ್ ಹಚ್ಚಲು ಪರವಾನಿಗಿ ಪಡೆಯಬೇಕು ಎಂಬ ನಿರ್ಧಾರಕ್ಕೆ ನಮ್ಮ ವಿರೋಧವಿದೆ. ಸಾಕಷ್ಟು ಮಸೀದಿಗಳ ಮೇಲೆ ಮೈಕ್ ಹಚ್ಚಲಾಗಿದೆ. ಅವರೆಲ್ಲರೂ ಪರವಾನಿಗಿ ತೆಗೆದುಕೊಂಡಿದ್ದಾರಾ? ಮೊದಲು ಅವರಿಗೆ ಪರವಾನಿಗಿ ಕೊಡಿ ಆಮೇಲೆ ನಾವೂ ಪರವಾನಿಗಿ ತೆಗೆದುಕೊಳ್ಳುತ್ತೇವೆ. ಮೈಕ್ ವಿಷಯವಾಗಿ ಯಾರೂ ಪರವಾನಿಗಿ ಪಡೆದುಕೊಳ್ಳಬೇಡಿ ಎಂದು ಗಣೇಶ ಮಂಡಳಿಗಳಿಗೆ ಮುತಾಲಿಕ್ ಕರೆ ನೀಡಿದರು.

ಇನ್ನು ಗಣೇಶ ಮಂಡಳಿವರು ಪೆಂಡಾಲ್‌ಗಳಲ್ಲಿ ಮದ್ಯ ಸೇವನೆ ಮಾಡುವುದು, ಇಸ್ಪೀಟ್ ಆಡುವುದನ್ನು ಮಾಡಿದರೆ ಶ್ರೀರಾಮ ಸೇನೆಯವರೇ ಆ ಪೆಂಡಾಲ್‌ಗಳನ್ನು ಕಿತ್ತು ಹಾಕಬೇಕಾಗುತ್ತದೆ. ಹಿಂದಿನ ಜಿಲ್ಲಾಧಿಕಾರಿಗಳು ಪಿಒಪಿ ಗಣೇಶನ ಮೂರ್ತಿಗಳನ್ನು ಬ್ಯಾನ್ ಮಾಡಿದ್ದರು. ಈಗ ಮತ್ತೆ ಪಿಒಪಿ ಗಣೇಶನ ಮೂರ್ತಿಗಳ ಮಾರಾಟವಾಗುತ್ತಿವೆ. ಅವುಗಳ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ಅಂತಹ ಕೇಂದ್ರಗಳ ಮೇಲೆ ಶ್ರೀರಾಮ ಸೇನೆ ದಾಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Edited By :
PublicNext

PublicNext

04/08/2022 04:03 pm

Cinque Terre

73 K

Cinque Terre

32

ಸಂಬಂಧಿತ ಸುದ್ದಿ