ಇಸ್ಲಾಮಾಬಾದ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ವಿಜಯಕ್ಕೆ ಫುಲ್ ಖುಷಿಯಾಗಿದ್ದು, ಪಾಕಿಸ್ತಾನಕ್ಕೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕೂಡ ಇತ್ತೀಚೆಗೆ ತಾಲಿಬಾನಿಗಳಿಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದರು. ಆದರೆ ಈಗ ಅವರದ್ದೇ ಪಕ್ಷ ಆಡಳಿತಾರೂಢ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನಾಯಕಿ ನೀಲಂ ಇರ್ಷಾದ್ ಶೇಖ್ ಬಹಿರಂಗವಾಗಿ ತಾಲಿಬಾನಿಗಳಿಗೆ ಬೆಂಬಲ ಸೂಚಿಸಿದ್ದಾರೆ.
ಹೌದು. ಪಾಕ್ ಸುದ್ದಿ ವಾಹಿನಿಯ ಡಿಬೇಟ್ನಲ್ಲಿ ಭಾಗವಹಿಸಿದ್ದ ನೀಲಂ ಶೇಖ್ ನೀಡಿರುವ ಹೇಳಿಕೆ ಇದೀಗ ಬಹುದೊಡ್ಡ ವಿವಾದ ಸೃಷ್ಟಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೀಲಂ ಇರ್ಷಾದ್ ಶೇಖ್ ಹೇಳಿದ್ದೇನು?:
ತಾಲಿಬಾನಿಗಳು ಖಂಡಿತ ಇಲ್ಲಿಗೆ ವಾಪಸ್ ಬರುತ್ತಾರೆ. ಕಾಶ್ಮೀರವನ್ನು ಗೆದ್ದು, ನಮಗೆ ಕೊಡುತ್ತಾರೆ. ಅಷ್ಟೇ ಅಲ್ಲದೆ ಇಮ್ರಾನ್ ಖಾನ್ ಪ್ರಧಾನಿಯಾದ ಮೇಲೆ ಪಾಕಿಸ್ತಾನ ಅಭಿವೃದ್ಧಿಗೊಂಡಿದೆ. ಈ ದೇಶದ ಮೌಲ್ಯ ಹೆಚ್ಚಿದೆ. ಪಾಕಿಸ್ತಾನದ ಜತೆ ನಾವು ಸದಾ ಇದ್ದೇವೆ ಎಂದು ತಾಲಿಬಾನಿಗಳು ನಮಗೆ ಹೇಳಿದ್ದಾರೆ. ಖಂಡಿತ ಕಾಶ್ಮೀರವನ್ನು ವಶಕ್ಕೆ ಪಡೆದು ನಂತರ ನಮಗೆ ಹಸ್ತಾಂತರ ಮಾಡುತ್ತಾರೆ ಎಂದು ನೀಲಂ ಹೇಳಿದ್ದಾರೆ.
ಅದಕ್ಕೆ ಪ್ರತಿಯಾಗಿ ಟಿವಿ ನಿರೂಪಕ, ತಾಲಿಬಾನಿಗಳು ಕಾಶ್ಮೀರ ಗೆದ್ದು ಪಾಕಿಸ್ತಾನಕ್ಕೆ ಕೊಡುತ್ತೇವೆ ಎಂದು ನಿಮಗೆ ಯಾರು ಹೇಳಿದ್ದಾರೆ ಎಂದು ನೀಲಂ ಅವರಿಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ನೀಲಂ, ಭಾರತ ನಮ್ಮನ್ನು ವಿಭಜಿಸಿದೆ. ನಾವು ಮತ್ತೊಮ್ಮೆ ತಾಲಿಬಾನಿಗಳೊಟ್ಟಿಗೆ ಒಂದಾಗುತ್ತೇವೆ. ಪಾಕ್ ಸೇನೆ ಬಲಿಷ್ಠವಾಗಿದೆ. ನಮ್ಮ ಸರ್ಕಾರಕ್ಕೂ ಸಾಕಷ್ಟು ಅಧಿಕಾರವಿದೆ. ಎಲ್ಲಕ್ಕೂ ಮಿಗಿಲಾಗಿ ತಾಲಿಬಾನ್ ನಮ್ಮೊಂದಿಗೆ ಇದೆ. ಅವರಿಗೂ ನಮ್ಮ ಸರ್ಕಾರ ಬೆಂಬಲ ನೀಡುತ್ತದೆ. ಹಾಗಾಗಿ ಅವರು ಖಂಡಿತ ಕಾಶ್ಮೀರವನ್ನು ಗೆದ್ದು ನಮಗೆ ಕೊಡುತ್ತಾರೆ ಎಂದು ನೀಲಂ ಉತ್ತರಿಸಿದ್ದಾರೆ.
PublicNext
25/08/2021 08:53 am