ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಜೋರಾಗಿದೆ. ಪರಿಣಾಮ ಅನೇಕ ಪುರುಷರು ತಮ್ಮ ಜೀವ ಉಳಿಸಿಕೊಳ್ಳಲು ಪತ್ನಿ, ಮಕ್ಕಳನ್ನು ಬಿಟ್ಟು ದೇಶವನ್ನು ತೊರೆಯುತ್ತಿದ್ದಾರೆ. ಹೀಗಾಗಿ ಆಫ್ಘಾನಿಸ್ತಾನದಲ್ಲಿ ಮಹಿಳೆಯರ ಪರಿಸ್ಥಿತಿ ಚಿಂತಾಜನಕವಾಗಿದೆ. ಸಾಧ್ಯವಾದಷ್ಟು ತಪ್ಪಿಸಿಕೊಂಡು, ಎಲ್ಲೆಲ್ಲೋ ಅಡಗಿಕೊಂಡು ಬದುಕು ಸವೆಸುತ್ತಿದ್ದಾರೆ.
ತಾಲಿಬಾನಿಗಳ ತಪ್ಪಿಸಿಕೊಂಡ ಅಫ್ಘಾನಿಸ್ತಾನದ ದಯಕುಂಡಿ ಎಂಬಲ್ಲಿನ 25 ವರ್ಷದ ಮಹಿಳೆಯೊಬ್ಬರು ತಮ್ಮ ಸ್ನೇಹಿತರ ಮನೆಯಲ್ಲಿ ಅಡಗಿ ಕುಳಿತಿದ್ದಾರೆ. ಬದುಕುವ ದಾರಿ ತಿಳಿಯದ ಮಹಿಳೆ ಗುಟ್ಟಾಗಿ ಇಂಗ್ಲಿಷ್ ಪತ್ರಿಕೆಯೊಂದನ್ನು ಸಂಪರ್ಕಿಸಿ ಅಲ್ಲಿಂದ ವಾಟ್ಸ್ಆ್ಯಪ್ ಸಂದೇಶದ ಮೂಲಕ ಪ್ರಧಾನಿ ಮೋದಿ ಅವರಿಗೆ ಇ-ರಾಖಿ ಹಾಗೂ ಧ್ವನಿ ಸಂದೇಶವನ್ನು ಕಳುಹಿಸಿದ್ದಾರೆ.
ಧ್ವನಿ ಸಂದೇಶದಲ್ಲಿ ಏನಿದೆ?:
ಭಾರತದಲ್ಲಿ ಇಂದು ರಕ್ಷಾ ಬಂಧನ. ಖುದ್ದು ರಾಖಿ ಕಳುಹಿಸಲು ಸಾಧ್ಯವಾಗುತ್ತಿಲ್ಲ, ಇ-ರಾಖಿ ಕಳುಹಿಸುತ್ತಿದ್ದೇನೆ. ಅಫ್ಘಾನಿಸ್ತಾನದ ಎಲ್ಲಾ ಮಹಿಳೆಯರ ಪರವಾಗಿ ನಾನು ಇದನ್ನು ಕಳುಹಿಸುತ್ತಿದ್ದೇನೆ. ದಯವಿಟ್ಟು ಪ್ರಧಾನಿ ಸಹೋದರರೇ, ಎಲ್ಲಾ ಹೆಣ್ಣುಮಕ್ಕಳ ಪ್ರಾಣ-ಮಾನವನ್ನು ನೀವೇ ಕಾಪಾಡಲು ಸಾಧ್ಯ. ಹೇಗಾದರೂ ಮಾಡಿ ನಮ್ಮನ್ನೆಲ್ಲಾ ಈ ರಕ್ಕಸರಿಂದ ರಕ್ಷಿಸಿ.
ನಾನು ಇಲ್ಲಿ ಸರ್ಕಾರಿ ಉದ್ಯೋಗಿ. ಉಗ್ರರಿಂದ ಹೇಗೋ ತಪ್ಪಿಸಿಕೊಂಡು ಬಂದಿದ್ದೇನೆ. ಉದ್ಯೋಗ ಮಾಡುತ್ತಿರುವ ಹೆಣ್ಣುಮಕ್ಕಳನ್ನು ಅವರು ಹುಡುಕುತ್ತಿದ್ದಾರೆ. ನನ್ನ ಬದುಕು ಎಂದಿಗೆ ಅಂತ್ಯವಾಗುವುದೋ ತಿಳಿದಿಲ್ಲ. ದಯವಿಟ್ಟು ಇಲ್ಲಿಯ ಹೆಣ್ಣುಮಕ್ಕಳ ರಕ್ಷಣೆ ಮಾಡಿ.
ನಮಗೆ ಭಾರತಕ್ಕೆ ಬರಲು ವಿಸಾ ಕಲ್ಪಿಸಿ. ಇಲ್ಲಿ ಸಹಸ್ರಾರು ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ತಯಾರಿ ನಡೆಸಿದ್ದಾರೆ. ಅತ್ಯಾಚಾರಿಗಳ ಕೈಯಲ್ಲಿ ಸಿಗುವ ಮೊದಲೇ ತಮ್ಮ ಮಕ್ಕಳಿಗೂ ವಿಷವುಣಿಸಿ ಸಾಯಲು ಮಹಿಳೆಯರು ಸಿದ್ಧರಾಗಿದ್ದಾರೆ. ನಮಗೆ ವೀಸಾ ಕೊಟ್ಟು ಎಲ್ಲರ ಪ್ರಾಣ ಕಾಪಾಡಿ. ಜೀವನ ಪರ್ಯಂತ ನಾವು ಋಣಿಯಾಗಿರುತ್ತೇವೆ. ಪ್ಲೀಸ್ ಪ್ಲೀಸ್… ನಿಮ್ಮ ಉತ್ತರಕ್ಕಾಗಿ ನಿರೀಕ್ಷಿಸುತ್ತಿದ್ದೇವೆ.
PublicNext
23/08/2021 08:56 am