ಬೀಜಿಂಗ್: ಅಮೆರಿಕದ ನೂತನ ಅಧ್ಯಕ್ಷ ಜೋ ಬಿಡೆನ್ ಗೆಲುವನ್ನು ಒಪ್ಪುವುದಿಲ್ಲ ಎಂದು ಚೀನಾ ಹೇಳಿದೆ.
ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್ ಅವರು ಅವರು ಅಮೆರಿಕದ ಅಧ್ಯಕ್ಷರಾಗಿ ಹಾಗೂ ಕಮಲಾ ಹ್ಯಾರಿಸ್ ಉಪಾಧ್ಯಕ್ಷಯಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಈ ನಾಯಕರಿಗೆ ವಿವಿಧ ದೇಶಗಳ ನಾಯಕರು ಶುಭಾಶಯ ತಿಳಿಸಿದ್ದಾರೆ. ಆದರೆ ಚೀನಾ ಮಾತ್ರ ಜೋ ಬಿಡೆನ್ ಅವರ ವಿಜಯವನ್ನು ಒಪ್ಪುವುದಿಲ್ಲ ಎಂದು ಹೇಳಿದ್ದು, ಇದಕ್ಕೆ ಕಾರಣವನ್ನು ಕೂಡ ನೀಡಿದೆ.
ಈ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್, 'ಅಮೆರಿಕದಲ್ಲಿ ಮತ ಎಣಿಕೆಯ ಅಂತಿಮ ಫಲಿತಾಂಶ ಇನ್ನೂ ಹೊರಬಿದ್ದಿಲ್ಲ. ಅಷ್ಟೇ ಅಲ್ಲದೇ ಕಾರ್ಯನಿರತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫಲಿತಾಂಶದ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಾನೂನು ಸಮರ ನಡೆಸುತ್ತಿದ್ದಾರೆ. ಹೀಗಾಗಿ ಅಂತಿಮವಾಗಿ ಅಧಿಕೃತ ಫಲಿತಾಂಶ ಘೋಷಣೆಯಾಗುವವರೆಗೂ ಜೋ ಬಿಡೆನ್ ವಿಜಯವನ್ನು ಒಪ್ಪಿಕೊಳ್ಳುವುದಿಲ್ಲ' ಎಂದು ತಿಳಿಸಿದ್ದಾರೆ.
ಚೀನಾ ಅಷ್ಟೇ ಅಲ್ಲದೆ ರಷ್ಯಾ ಹಾಗೂ ಮೆಕ್ಸಿಕೋ ದೇಶಗಳೂ ಜೋ ಬಿಡೆನ್ ಅವರಿಗೆ ಅಧಿಕೃತ ಅಭಿನಂದನೆ ಸಲ್ಲಿಸಿಲ್ಲ. ಅಮೆರಿಕದ ಇತಿಹಾಸದಲ್ಲೇ ಅತೀ ಹೆಚ್ಚು ಮತಗಳನ್ನು ಪಡೆದು ಅಧ್ಯಕ್ಷರಾಗುತ್ತಿರುವ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಜೋ ಬಿಡೆನ್ ಪಾತ್ರರಾಗಿದ್ದಾರೆ.
PublicNext
09/11/2020 05:37 pm