ಬಿಜೆಪಿ, ಇತ್ತೀಚೆಗೆ ತನ್ನ ಸಂಸದೀಯ ಮಂಡಳಿಯನ್ನು ಪುನರ್ ರಚನೆ ಮಾಡಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೈ ಬಿಡಲಾಗಿತ್ತು. ಜೊತೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಂಸದೀಯ ಮಂಡಳಿಗೆ ನೇಮಕ ಮಾಡುವ ಮೂಲಕ ಅಚ್ಚರಿ ಮೂಡಿಸಲಾಗಿತ್ತು.
ವಯೋಮಾನದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿದ್ದು, ಆದರೆ ಸಂಸದೀಯ ಮಂಡಳಿಗೆ ನೇಮಕ ಮಾಡಿಕೊಂಡ ಕಾರಣಕ್ಕಾಗಿ ಟೀಕೆಗಳೂ ಸಹ ಕೇಳಿ ಬಂದಿದ್ದವು. ಆದರೆ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯಡಿಯೂರಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಇದರ ಮಧ್ಯೆ ಸಂಸದೀಯ ಮಂಡಳಿಯಿಂದ ತಮ್ಮನ್ನು ಕೈಬಿಟ್ಟಿರುವ ಕುರಿತಂತೆ ನಿತಿನ್ ಗಡ್ಕರಿಯವರಿಗೆ ಅಸಮಾಧಾನ ಉಂಟಾಗಿದೆ ಎಂದು ಹೇಳಲಾಗಿದ್ದು, ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಅವರು ನಾಗಪುರದಲ್ಲಿ ಆಡಿರುವ ಮಾತು ಚರ್ಚೆಗೆ ಕಾರಣವಾಗಿದೆ. ಯಾವುದೇ ಒಬ್ಬ ವ್ಯಕ್ತಿಯನ್ನು ಅಗತ್ಯವಿದ್ದ ಸಂದರ್ಭದಲ್ಲಿ ಬಳಸಿಕೊಂಡು ಕೆಲಸ ಮುಗಿದ ಬಳಿಕ ದೂರ ತಳ್ಳುವುದು ತಪ್ಪು ಎಂದು ಗಡ್ಕರಿಯವರು ಹೇಳಿದ್ದು, ಇದು ಬಿಜೆಪಿ ವರಿಷ್ಠರನ್ನು ಉದ್ದೇಶಿಸಿಯೇ ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
PublicNext
30/08/2022 03:44 pm