ಬೆಂಗಳೂರು- ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ, ಫೋಟೋ ನಿರ್ಬಂಧ ಹೇರಿರುವ ಆದೇಶವನ್ನು ತಡರಾತ್ರಿ ರಾಜ್ಯ ಸರ್ಕಾರ ಹಿಂಪಡೆದಿದೆ. ಫೋಟೋ, ವಿಡಿಯೋ ಬ್ಯಾನ್ ಮಾಡಿ ಶುಕ್ರವಾರ ಆದೇಶ ಹೊರಡಿಸಲಾಗಿತ್ತು.ಆದರೆ ಈ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ನ ಆದೇಶ ವಾಪಸ್ ಪಡೆದಿದೆ.
ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ಬ್ಯಾನ್ ಮಾಡಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಭ್ರಷ್ಟಾಚಾರಿ ವಿರೋಧಿ ಹೋರಾಟಗಾರರಿಂದ ಭಾರೀ ಆಕ್ಷೇಪ ವ್ಯಕ್ತವಾಗಿತ್ತು.
ಸರ್ಕಾರದ ಈ ನಡೆ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಆರ್ ಎಸ್ ಪಕ್ಷ, ಆಮ್ ಆದ್ಮಿ ಪಕ್ಷ ಸೇರಿದಂತೆ ಸಾಮಾಜಿಕ ಹೋರಾಟಗಾರರಿಂದಲೂ ಭಾರೀ ವಿರೋಧ ವ್ಯಕ್ತವಾಗಿತ್ತು.
ರಾಜ್ಯಾದ್ಯಂತ ಎಲ್ಲಾ ಜಿಲ್ಲೆ, ತಾಲೂಕು ಹಾಗೂ ರಾಜ್ಯ ಮಟ್ಟದಲ್ಲಿ, ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳಲ್ಲಿಸಾರ್ವಜನಿಕರು ಅವರ ಕೆಲಸ ಕಾರ್ಯಗಳ ನಿಮಿತ್ತ ಆಗಮಿಸುವ ಸಂದರ್ಭದಲ್ಲಿಕೆಲವು ಖಾಸಗಿ ವ್ಯಕ್ತಿಗಳು ಸರ್ಕಾರಿ ಕಚೇರಿಗಳಿಗೆ ಕಚೇರಿ ವೇಳೆಯಲ್ಲಿ ಒಂದು ಕಚೇರಿಯ ಫೋಟೋ/ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಹಾಗೂ ಇಂತಹ ಪೋಟೋ/ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಇಲಾಖೆ, ಸರ್ಕಾರದ ಘನತೆಗೆ ಕುಂದುಂಟಾಗುತ್ತಿದೆ.
ಅದರಲ್ಲೂ, ವಿಶೇಷವಾಗಿ ಮಹಿಳಾ ನೌಕರರಿಗೆ ತೊಂದರೆ ಉಂಟಾಗುತ್ತಿರುವುದರಿಂದ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ, ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಫೋಟೋ / ವಿಡಿಯೋ ಮಾಡದಂತೆ ನಿಷೇಧಿಸಲಾಗಿದೆ.ಸರ್ಕಾರಿ ನೌಕರರ ಸಂಘದ ಮನವಿಯಂತೆ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಅಧೀನ ಕಾರ್ಯದರ್ಶಿ ಈ ಆದೇಶ ಹೊರಡಿಸಿತ್ತು.
PublicNext
16/07/2022 07:55 am