ಬೆಂಗಳೂರು: ರಾಜ್ಯದಲ್ಲಿ ಪರೀಕ್ಷಾ ಅಕ್ರಮ ಬಯಲಾದ ಬೆನ್ನಲ್ಲೆ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಮೇಲೆ ಶಿಕ್ಷಣ ಇಲಾಖೆ ಮೇಲೆ ಒತ್ತಡ ಹೆಚ್ಚಾಗಿದೆ.
ಇದೇ ತಿಂಗಳು ಮೇ. 21 ಮತ್ತು ಮೇ 22 ರಂದು ಪರೀಕ್ಷೆ ರಾಜ್ಯದಲ್ಲಿ ನಡೆಯಲಿದೆ.ಈ ಬಗ್ಗೆ ವಿಧಾನಸೌಧದಲ್ಲಿ ಪ್ರೆಸ್ ಮೀಟ್ ನಡೆಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪರೀಕ್ಷೆಗೆ ಹದ್ದಿನ ಕಣ್ಣಿಡಲಾಗಿದೆ ಎಂದರು.
ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ ಮೇ 21 ಮತ್ತು ಮೇ 22 ರಂದು ನಡೆಯಲಿದೆ. ಯಾರೂ ವದಂತಿಗಳಿಗೆ ಕಿವಿಗೊಡಬಾರದು. ಈ ಭಾರಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, 1 ಲಕ್ಷದ 6 ಸಾವಿರಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈಗಾಗಲೇ ಭದ್ರತೆ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಪೋಲಿಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ, ಚರ್ಚಿಸಿ ಒಂದಷ್ಟು ಮಾಹಿತಿ ಪಡೆದಿದ್ದೇವೆ ಅಂತಾ ಸಚಿವರು ತಿಳಿಸಿದರು.
ಒಟ್ಟು 435 ಕೇಂದ್ರಗಳಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಯಲಿದ್ದು, ಚಿಕ್ಕೋಡಿಯಲ್ಲಿ ಹೆಚ್ಚು ಕೇಂದ್ರಗಳು ಇರಲಿವೆ. ಪರೀಕ್ಷಾ ಕೇಂದ್ರಗಳಲ್ಲಿ ಎರಡು ಹಂತದಲ್ಲಿ ತಪಾಸಣೆ ನಡೆಯಲಿದೆ. ಪೊಲೀಸರು ಮೊದಲ ಹಂತದಲ್ಲಿ ತಪಾಸಣೆ ನಡೆಸಿದ ಬಳಿಕ ನಮ್ಮ ಇಲಾಖೆಯವರು ಎರಡನೇ ಹಂತದಲ್ಲಿ ತಪಾಸಣೆ ನಡೆಸಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಕೆಲವು ನಿಯಮಗಳನ್ನು ಮಾಡಲಾಗಿದ್ದು, ಈ ಬಗ್ಗೆ ಮೇ 14ರಂದು ಪರೀಕ್ಷಾ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮೊದಲೇ ಹಾಜರಾಗಬೇಕು. ಯಾರಿಗೂ ಕೈಗಡಿಯಾರಕ್ಕೆ ಅವಕಾಶ ಇಲ್ಲ. ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್ ವಸ್ತು ಒಯ್ಯುವಂತಿಲ್ಲ. ಮೊಬೈಲ್, ವಾಚ್, ಎಲೆಕ್ಟ್ರಾನಿಕ್ ಡಿವೈಸ್‌ಗೆ ಅವಕಾಶ ಇಲ್ಲ. ಪ್ರಶ್ನೆಪತ್ರಿಕೆ ಗೌಪ್ಯತೆ, ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲೇ ಗೋಡೆ ಗಡಿಯಾರ ಅಳವಡಿಸಲಾಗುವುದು ಜೊತೆಗೆ ಸಿಸಿಟಿವಿ ಅಳವಡಿಕೆ ಕಡ್ಡಾಯವಾಗಿರಲಿದೆ ಎಂದು ಬಿ.ಸಿ.ನಾಗೇಶ ರವರು ತಿಳಿಸಿದರು.
ಕೊಠಡಿಯಲ್ಲಿ 20 ಮಂದಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಮೆಟಲ್ ಡಿಟೆಕ್ಟರ್ ಬಳಕೆ ಬಗ್ಗೆಯೂ ತೀರ್ಮಾನ ಮಾಡಲಾಗಿದೆ. ಅಗತ್ಯವಿರುವ ಸೂಕ್ಷ್ಮ ಕೇಂದ್ರಗಳಲ್ಲಿ ಮೆಟಲ್ ಡಿಟೆಕ್ಟರ್ ಬಳಸಲಾಗುವುದು. ಮೂರು ದಿನದ ಮೊದಲೇ ಪರೀಕ್ಷಾ ಕೇಂದ್ರಗಳನ್ನ ವಶಕ್ಕೆ ಪಡೆಯುತ್ತೇವೆ. ಪರೀಕ್ಷಾ ಸಂಬಂಧ ಮೂರು ಕಮಿಟಿಯನ್ನು ಈಗಾಗಲೇ ರಚಿಸಲಾಗಿದೆ ಎಂದರು.
PublicNext
10/05/2022 08:08 pm