ಬೆಳಗಾವಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಾಗೂ ಕಾನೂನು ವಿಶ್ವವಿದ್ಯಾಲಯ ನಡೆಯನ್ನು ಖಂಡಿಸಿ ನಡೆಸುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈಗ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆ ಬೆಳಗಾವಿ ಸುವರ್ಣ ಸೌಧವನ್ನು ತಲುಪಿದೆ.
ಹೌದು..ಮೂರು ಮತ್ತು ಐದನೇ ಸೆಮಿಸ್ಟರ್ ಕಾನೂನು ತರಗತಿ ಆರಂಭಿಸಲು ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ. ಎನ್‌ಎಸ್‌ಯುಐ ನೇತೃತ್ವದಲ್ಲಿ 250ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ನವನಗರದ ಕಾನೂನು ವಿಶ್ವ ವಿದ್ಯಾಲಯದ ಎದುರು ಹಗಲಿರುಳು ಧರಣಿ ನಡೆಸಿ ಉಪಕುಲಪತಿಗೆ ಮನವಿ ಸಲ್ಲಿಸಿದ್ದರು. ಈಗ ಮುಂದುವರಿದ ಭಾಗವಾಗಿ ವಿದ್ಯಾರ್ಥಿಗಳ ಪ್ರತಿಭಟನೆ ಬೆಳಗಾವಿ ಸುವರ್ಣ ಸೌಧವನ್ನು ತಲುಪಿದೆ.
ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿರುವ ಹಿನ್ನಲೆಯಲ್ಲಿ ಸುವರ್ಣ ಸೌಧದ ಎದುರಿನಲ್ಲಿ ಪ್ರತಿಭಟನೆಗೆ ವಿದ್ಯಾರ್ಥಿಗಳು ಮುಂದಾಗಿದ್ದು, ಮೊದಲ ಮತ್ತು ಎರಡನೇ ವರ್ಷದ ಕಾನೂನು ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಆಕ್ಟೋಬರ್‌ನಲ್ಲಿ ಮುಗಿದು, ಈ ತಿಂಗಳಲ್ಲಿ ಮುಂದಿನ ತರಗತಿಗಳು ಆರಂಭ ಆಗಬೇಕಿತ್ತು. ಆದರೆ, ವಿಶ್ವವಿದ್ಯಾಲಯ ಪರೀಕ್ಷೆ ನಡೆಸದೆ, ಮುಂದಿನ ಸೆಮಿಸ್ಟರ್ ತರಗತಿಯನ್ನೂ ನಡೆಸದೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದರು. ಯಾವುದೇ ಕಾರಣಕ್ಕೂ ಭೌತಿಕವಾಗಿ ಪರೀಕ್ಷೆ ನಡೆಸಬಾರದು. ಆನ್ಲೈನ್ ಅಥವಾ ಅಸೈನ್ಮೆಂಟ್ ಮಾದರಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ವಿದ್ಯಾರ್ಥಿಗಳು ಪ್ರತಿವಾದ ಮಾಡಿದರು.
PublicNext
14/12/2021 08:49 am