ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ವಿಶೇಷ ನ್ಯಾಯಾಲಯವು ಬುಧವಾರ ಯಡಿಯೂರಪ್ಪ ವಿರುದ್ಧ ತನಿಖೆಗೆ ಆದೇಶ ಕೊಟ್ಟಿದೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇದು ಬಿಜೆಪಿಗೆ ಮುಜುಗರ ಉಂಟು ಮಾಡುವ ಸಾದ್ಯತೆ ಇದೆ. ಹೈಕೋರ್ಟ್ ದೂರು ಮರುಸ್ಥಾಪನೆ ಮಾಡಿ ವಿಚಾರಣೆ ಮುಂದುವರಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಆದೇಶ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಸೂಚನೆ ನೀಡಿದೆ.
ಹಾಗಾಗಿ ಇದೀಗ ಬಿ.ಎಸ್ ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಶಶಿಧರ ಮರಡಿ, ಸಂಜಯ್ ಶ್ರೀ, ಚಂದ್ರಕಾಂತ ರಾಮಲಿಂಗಮ್, ಸಚಿವ ಎಸ್.ಟಿ.ಸೋಮಶೇಖರ್, ಡಾ.ಜಿ.ಸಿ ಪ್ರಕಾಶ್, ಕೆ.ರವಿ, ವಿರುಪಾಕ್ಷಪ್ಪ ಯಮಕನಮರಡಿ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿ ಕಾನೂನು ರೀತ್ಯ ಕ್ರಮ ಜರುಗಿಸಲಿದ್ದಾರೆ.
ಹೈಕೋರ್ಟ್ ಆದೇಶವೇನು?: ಹೈಕೋರ್ಟ್ ಸೆ. 7ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ಮುಖ್ಯಮಂತ್ರಿಯಾಗಿದ್ದ ವೇಳೆ ಬಿ.ಎಸ್. ಯಡಿಯೂರಪ್ಪ ಮತ್ತು ಪುತ್ರ ಬಿ.ವೈ. ವಿಜಯೇಂದ್ರ ಸೇರಿದಂತೆ ಅವರ ಕುಟುಂಬಸ್ಥರು ರಾಮಲಿಂಗಂ ಕನಸ್ಟ್ರಕ್ಷನ್ ಕಂಪನಿಯಿಂದ 12 ಕೋಟಿ ರೂ. ನಗದು ಸ್ವೀಕರಿಸಿದ ಆರೋಪ ಸಂಬಂಧ ದಾಖಲಾಗಿದ್ದ ಖಾಸಗಿ ದೂರನ್ನು ಮರು ವಿಚಾರಣೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆದೇಶಿಸಿದೆ.
PublicNext
14/09/2022 10:07 pm