ಆನೇಕಲ್ : ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆನೇಕಲ್ ತಾಲೂಕಿಗೆ ವಿವಿಧ ಕಾಮಗಾರಿಗಳಿಗೆ ಬಿಡುಗಡೆಯಾದ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಗೊಲ್ ಮಾಲ್ ನಡೆದಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಗುರುವಾರ ಆರೋಪಿಸಿದರು.
ಈ ಹಗರಣಕ್ಕೆ ಸಂಬಂಧಿಸಿದಂತೆ ಸುಮಾರು 5700 ಪುಟಗಳ ದಾಖಲೆಗಳನ್ನೂ ಬಿಡುಗಡೆ ಮಾಡಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.
2014 ರಿಂದ 2020ರ ಅವಧಿಯಲ್ಲಿ ಆನೇಕಲ್ ಯೋಜನಾ ಪ್ರಾಧಿಕಾರ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ 576 ಕೋಟಿ ರೂಪಾಯಿಗೂ ಅಧಿಕ ಹಣ ಬಿಡುಗಡೆಯಾಗಿದೆ.
ಇಷ್ಟು ಹಣದಲ್ಲಿ ಕಾಮಗಾರಿಗಳು ಪೂರ್ಣಗೊಂಡಿದ್ದರೆ ಆನೇಕಲ್ ಮಾದರಿ ತಾಲೂಕು ಆಗಬೇಕಿತ್ತು.
ಅಧಿಕಾರಿಗಳು ನೀಡಿರುವ ಎಲ್ಲ ದಾಖಲೆ ಇಟ್ಟುಕೊಂಡು ಆಯಾ ಪ್ರದೇಶಗಳಲ್ಲಿ ಖುದ್ದಾಗಿ ಪರಿಶೀಲಿಸಿದಾಗ ಬಿಡುಗಡೆಯಾಗಿರುವ ಒಟ್ಟು ಅನುದಾನದ ಪೈಕಿ ಅಲ್ಪ ಮಾತ್ರ ಬಳಕೆಯಾಗಿದೆ.
ಕಾಮಗಾರಿ ಬಗ್ಗೆ ಮಾಹಿತಿ ಹಕ್ಕಿನ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳೂ ಮಾಹಿತಿ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಎಸಿಬಿ ಮತ್ತು ಲೋಕಾಯುಕ್ತದಲ್ಲಿ ಅಧಿಕಾರ ದುರುಪಯೋಗ, ವಂಚನೆ, ನಕಲಿ ದಾಖಲೆ ತಯಾರಿಕೆ, ಸಾರ್ವಜನಿಕ ಹಣ ದುರ್ಬಳಕೆ ಮತ್ತು ಭ್ರಷ್ಟಾಚಾರ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.
ತಾಲೂಕಿನ 69 ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ 260 ಕೋಟಿ ರೂ. ಮೊತ್ತದ ಹಗರಣ ನಡೆಸಿದ್ದು, 67 ಕೆರೆಗಳು ಮತ್ತು ಕನಕಪುರ ತಾಲೂಕಿನ ಎರಡು ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯಲ್ಲೂ ಅಪಾರ ಭ್ರಷ್ಟಾಚಾರ ನಡೆದಿದೆ ಎಂದರು.
PublicNext
25/12/2020 08:35 pm