ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಬಿ​ ಫ್ಯಾನ್ಸ್​ ನಿರ್ಧಾರಕ್ಕೆ ಸುಮಲತಾ ಬೇಸರ: ಯಾಕೆ ಗೊತ್ತಾ?

ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ನಿಧನದ ಬಳಿಕ ಅವರ ಹೆಸರನ್ನು ಅಮರವಾಗಿಸಲು ಅನೇಕ ಕೆಲಸಗಳು ನಡೆಯುತ್ತಿವೆ. ಕೆಲವು ರಸ್ತೆ, ವೃತ್ತಕ್ಕೆ ಪುನೀತ್​ ಹೆಸರನ್ನು ಇಡಲಾಗಿದೆ. ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಸಹ ಘೋಷಣೆ ಆಗಿದೆ. ಇದು ಅವರ ಅಭಿಮಾನಿಗಳಿಗೆ ಹೆಮ್ಮೆ ತಂದಿರುವ ವಿಚಾರ. ಅದೇ ರೀತಿ ‘ರೆಬೆಲ್​ ಸ್ಟಾರ್​’ ಅಂಬರೀಶ್ ಅವರಿಗೂ ಇಂಥ ಗೌರವಗಳು ಸಲ್ಲಬೇಕು ಎಂದು ಅಂಬಿ ಪ್ಯಾನ್ಸ್​ ಬೇಡಿಕೆ ಇಡುತ್ತಿದ್ದಾರೆ.

ಈ ಬಗ್ಗೆ ರೆಬಲ್ ಸ್ಟಾರ್ ಅಂಬರೀಶ್ ಪತ್ನಿ, ಸಂಸದೆ ಸುಮಲತಾ ಅವರು ಬಹಿರಂಗವಾಗಿ ಪತ್ರ ಬರೆದಿದ್ದು, ಅಭಿಮಾನಿಗಳ ಕೆಲವು ನಿರ್ಧಾರಗಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸುಮಲತಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲೂ ಈ ವಿಚಾರವಾಗಿ ಬರೆದುಕೊಂಡಿದ್ದಾರೆ.

ಇನ್‌ಸ್ಟಾದಲ್ಲಿ ಏನಿದೆ?:

ನಮ್ಮ ಪ್ರೀತಿಯ ಡಾ. ಅಂಬರೀಶ್ ಅವರನ್ನು ಆರಾಧ್ಯ ದೈವದಂತೆ ಪ್ರೀತಿಸಿ, ಅವರ ನೆನಪನ್ನು ಚಿರಸ್ಥಾಯಿಯಾಗಿ ಬೆಳಗಿಸುತ್ತಿರುವ ನೆಚ್ಚಿನ ಅಭಿಮಾನಿ ಸಂಘಗಳು ಹಾಗೂ ಇನ್ನಿತರ ಸಂಘಟನೆಗಳು ಇಂದು ಅಂಬರೀಶ್ ಅವರ ಸ್ಮಾರಕ ಅಭಿವೃದ್ಧಿಗೊಳಿಸುವುದು, ಅವರ ಹೆಸರಿನಲ್ಲಿ ರಸ್ತೆಗಳನ್ನು ನಾಮಕರಣ ಮಾಡುವುದು ಮತ್ತು ಇನ್ನಿತರ ಬೇಡಿಕೆಗಳನ್ನು ಒತ್ತಾಯಿಸಿ ಹೋರಾಟ ಮಾಡುವುದಾಗಿ ಹೇಳಿರುವುದು ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ಗಮನಕ್ಕೆ ಬಂದಿದೆ.

ನಮ್ಮ ಕುಟುಂಬದೊಂದಿಗೆ ಅತಿ ಹೆಚ್ಚು ಒಡನಾಟ ಹೊಂದಿದ್ದ ಹಾಗೂ ನಮ್ಮ ಮನೆ ಮಗನಂತಿದ್ದ ಪುನೀತ್ ರಾಜ್​ಕುಮಾರ್ ಅವರನ್ನು ಕಳೆದುಕೊಂಡಿರುವ ಆಘಾತಕಾರಿ ಘಟನೆಯಿಂದ ನನಗಾಗಿರುವ ನೋವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ.

ಇದರೊಂದಿಗೆ ಚಿತ್ರರಂಗ, ಅಭಿಮಾನಿಗಳು ಹಾಗೂ ಕರ್ನಾಟಕ ರಾಜ್ಯದ ಜನತೆಗೆ ತುಂಬಲಾರದಂತ ನಷ್ಟ ಉಂಟಾಗಿದ್ದು, ಈ ಸಮಯದಲ್ಲಿ ತಾವುಗಳು ಹೋರಾಟ ಮಾಡುವ ನಿರ್ಧಾರ ಮಾಡಿರುವುದು ಎಲ್ಲರ ಹೃದಯದ ಮೇಲೆ ಆಗಿರುವ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತದೆ. ಆದುದರಿಂದ, ಈ ಸಮಯದಲ್ಲಿ ಈ ವಿಷಯ ಪ್ರಸ್ತಾಪಿಸುವುದು ಸಮಂಜಸವಲ್ಲ.

ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ, ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುವುದರಿಂದ ಅಂಬರೀಷ್ ಅವರ ಘನತೆ ಹಾಗೂ ಗೌರವಕ್ಕೆ ಧಕ್ಕೆಯಾಗುತ್ತದೆ. ಯಾವುದೇ ಪ್ರಶಸ್ತಿಯಾದರು ಕೇಳಿ ಪಡೆಯುವುದು ಅತಿಶಯೋಕ್ತಿಯಾಗಬಾರದು.

ಎಲ್ಲಾ ಪ್ರಶಸ್ತಿಗಳನ್ನು ಮೀರಿದಂತಹ ಪ್ರೀತಿ ಮತ್ತು ಅಭಿಮಾನವನ್ನು ನೀವುಗಳು ನಮ್ಮ ಕುಟುಂಬಕ್ಕೆ ನೀಡಿದ್ದೀರಿ. ಅಂಬರೀಷ್ ಅವರು ತಮ್ಮ ಜೀವನದಲ್ಲಿ ಯಾವ ಪ್ರಶಸ್ತಿ, ಹುದ್ದೆ ಅಥವಾ ಸನ್ಮಾನವನ್ನು ಬಯಸಿದವರಲ್ಲ. ಹೀಗಾಗಿ ಅಂಬರೀಷ್ ಅವರ ಅಭಿಮಾನಿಗಳಾಗಿ ತಾವುಗಳು ಸಹ ಅವರ ಹಾದಿಯಲ್ಲಿ ನಡೆಯಬೇಕು ಎನ್ನುವುದು ನನ್ನ ಆಶಯ. ಆದುದರಿಂದ, ಈ ಸಮಯದಲ್ಲಿ ಪ್ರಶಸ್ತಿ ಕೋರಿ ಹೋರಾಟ ಅಥವಾ ಪ್ರತಿಭಟನೆ ನಡೆಸುವುದು ಅಂಬರೀಷ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ವಿಷಯವಾಗಿದೆ.

ಆದುದರಿಂದ ತಮ್ಮೆಲ್ಲರ ಅಭಿಮಾನ ಮತ್ತು ಪ್ರೀತಿ-ವಾತ್ಸಲ್ಯಗಳನ್ನು ಗೌರವಿಸುತ್ತ ಹಾಗೂ ನಿಮ್ಮೆಲ್ಲರ ಆಸೆಯನ್ನು ಮುಂದಿನ ದಿನಗಳಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಈಡೇರಿಸುತ್ತದೆ ಎಂದು ಮಾನ್ಯ ಮುಖ್ಯಮಂತ್ರಿಗಳ ಮೇಲೆ ಭರವಸೆಯನ್ನು ಇಡುತ್ತಾ, ತಾವು ತೆಗೆದುಕೊಂಡಿರುವ ಈ ಹೋರಾಟದ ನಿರ್ಧಾರವನ್ನು ಹಿಂಪಡೆದು ನವೆಂಬರ್ 24ನೇ ತಾರೀಕಿನಂದು ಅಂಬರೀಷ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆಯನ್ನು ಶಾಂತಿಯುತವಾಗಿ ನೆರವೇರಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರೋಣ ಎಂದು ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತೇನೆ.

ವಂದನೆಗಳೊಂದಿಗೆ

ತಮ್ಮ ವಿಶ್ವಾಸಿ,

(ಸುಮಲತಾ ಅಂಬರೀಷ್)

Edited By : Vijay Kumar
PublicNext

PublicNext

24/11/2021 02:25 pm

Cinque Terre

35.39 K

Cinque Terre

2

ಸಂಬಂಧಿತ ಸುದ್ದಿ