ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಇಡೀ ಕುಟುಂಬವನ್ನೇ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೊರೊನಾ ಸಂದರ್ಭದಲ್ಲೂ ಭ್ರಷ್ಟಾಚಾರ ಎಸಗಿರುವ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ""ಮಗ, ಮೊಮ್ಮಗ ಸೇರಿದಂತೆ ತನ್ನ ಇಡೀ ಕುಟುಂಬವನ್ನೇ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಕ್ಷಣ ರಾಜೀನಾಮೆ ನೀಡಬೇಕು. ಈ ಇಡೀ ಹಗರಣದ ಬಗ್ಗೆ ನ್ಯಾಯಾಲಯದ ನಿಗಾದಲ್ಲಿ ತನಿಖೆಗೆ ವಿಶೇಷ ತನಿಖಾದಳವನ್ನು ರಚಿಸಬೇಕು" ಎಂದು ಆಗ್ರಹಿಸಿದ್ದಾರೆ.
'ನಾ ಖಾವುಂಗಾ ನಾ ಖಾನೆ ದೂಂಗಾ’ ಎನ್ನುತ್ತಲೇ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಈ ಘೋಷಣೆಯನ್ನು ‘ಮೈ ಖಾವುಂಗಾ ಔರ್ ಖಾನೆ ದೂಂಗಾ’ ಎಂದು ತಕ್ಷಣ ಬದಲಾಯಿಸಿಕೊಳ್ಳುವುದು ಒಳಿತು. ಈ ಭ್ರಷ್ಟಾಚಾರದ ಹಣದಲ್ಲಿ ತನ್ನ ಪಾಲೆಷ್ಟು ಎನ್ನುವುದನ್ನು ಕೂಡಾ ನರೇಂದ್ರ ಮೋದಿಯವರು ತಿಳಿಸಬೇಕು.
ಅವೈಜ್ಞಾನಿಕ ಜಿಎಸ್‌ಟಿ ಮೂಲಕ ದೇಶದ ಜನರನ್ನು ಲೂಟಿ ಮಾಡುತ್ತಿರುವ ನರೇಂದ್ರಮೋದಿಯವರ ಜೊತೆ ಪೈಪೋಟಿಗೆ ಇಳಿದಿರುವ ಬಿಎಸ್‌ವೈ ಅವರು ತನ್ನ ಮಗ ವಿಜಯೇಂದ್ರನ ಮೂಲಕ ವಿಎಸ್‌ಟಿ (ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್) ಮೂಲಕ ರಾಜ್ಯದ ಬೊಕ್ಕಸವನ್ನು ಲೂಟಿ ಮಾಡುತ್ತಿದ್ದಾರೆ.
ಮುಖ್ಯಮಂತ್ರಿಗಳ ಮಗ ಮತ್ತು ಮೊಮ್ಮಗ ಸೇರಿ ಟೆಂಡರ್ ಪ್ರಕ್ರಿಯೆ ಸಂಪೂರ್ಣ ಮುಗಿದಿರುವ ಕಾಮಗಾರಿಯಲ್ಲಿ ವರ್ಕ್ ಆರ್ಡರ್ ಕೊಡುವ ಹಂತದಲ್ಲಿ ಗುತ್ತಿಗೆದಾರರೊಬ್ಬರಿಂದ 17 ಕೋಟಿ ಹಣ ವಸೂಲಿಗೆ ಇಳಿದಿದ್ದು, ಈ ವ್ಯವಹಾರ ಕುದುರಿಸಿದ ಇಡೀ ಲಂಚಾವತಾರವನ್ನು ಮಾಧ್ಯಮ ಸಂಸ್ಥೆಯೊಂದು ಬಯಲಿಗೆಳೆದಿದೆ.
ರಾಜಾರೋಷವಾಗಿ ಹಣ ಒಂದೆಡೆಯಿಂದ ಇನ್ನೊಂದು ಕಡೆಗೆ ವರ್ಗಾವಣೆಯಾಗಿದೆ. ಒಂದು ಮೂಲದ ಮಾಹಿತಿಯ ಪ್ರಕಾರ ರಾಜ್ಯಗಳ ಗಡಿ ದಾಟಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿರುವ ಕಂಪೆನಿಗಳಲ್ಲಿ ಹಣ ಹೂಡಿಕೆಯಾಗಿದೆ. ಇದನ್ನು ಮನಿ ಲಾಂಡರಿಂಗ್ ಕಾಯ್ದೆಯಡಿ ತನಿಖೆಗೊಳಪಡಿಸಬೇಕಾಗುತ್ತದೆ.
ಇಡೀ ಭ್ರಷ್ಟಾಚಾರದಲ್ಲಿ ಹಣ ಯಾರ ಕೈಲಿ ಕೊಡಬೇಕು? ಯಾರನ್ನು ಸಂಪರ್ಕಿಸಬೇಕು? ಎಲ್ಲಿ-ಎಷ್ಟೊತ್ತಿಗೆ ಸಂಪರ್ಕಿಸಬೇಕು? ಬಾಕಿ ಹಣವನ್ನು ಯಾವಾಗ, ಯಾವ ಖಾತೆಗೆ ವರ್ಗಾಯಿಸಬೇಕು ಎನ್ನುವುದನ್ನೆಲ್ಲಾ ವಾಟ್ಸಾಪ್ನಲ್ಲಿ ಚರ್ಚಿಸಿದ್ದಾರೆ. ಯಡಿಯೂರಪ್ಪ ಅವರ ಮೊಮ್ಮಗ ತನ್ನ ಖಾತೆಗೆ ಹಣ ವರ್ಗಾಯಿಸಿಕೊಂಡಿರುವುದಕ್ಕೆ ಸ್ಪಷ್ಟ ಸಾಕ್ಷ್ಯಗಳಿವೆ.
ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ಕೊಡಲು ವಿಜಯೇಂದ್ರ ಹೆಸರಲ್ಲಿ ಬಿಡಿಎ ಕಮಿಷನರ್ ಪ್ರಕಾಶ್ ಗುತ್ತಿಗೆದಾರರಿಂದ ರೂ.12 ಕೋಟಿ ಕೇಳುತ್ತಾರೆ. ಈ ಹಣ 37 ಕ್ರೆಸೆಂಟ್ ಹೋಟೆಲಿನ ಮಾಲೀಕ ರವಿ ಎನ್ನುವವರ ಮೂಲಕ ಸಂದಾಯವಾಗಿದ್ದನ್ನು ವಿಜಯೆಂದ್ರ ಅವರೇ ಟಿವಿ ಚಾನೆಲ್‌ನ ಸ್ಟ್ರಿಂಗ್ ಆಪರೇಷನ್‌ನಲ್ಲಿ ಒಪ್ಪಿಕೊಂಡಿದ್ದಾರೆ.
ಸಿಎಂ ಮತ್ತು ಸೂಪರ್ ಸಿಎಂ ಹೆಸರಲ್ಲಿ 12 ಕೋಟಿ ರೂಪಾಯಿ ಸಂದಾಯ ಆಗಿರುವುದನ್ನು ಒಪ್ಪಿಕೊಂಡ ಬಳಿಕವೂ ಆ ಐಎಎಸ್ ಅಧಿಕಾರಿ ಮತ್ತು ಹೋಟೆಲ್ ಮಾಲೀಕರ ವಿರುದ್ಧ ದೂರು ದಾಖಲಿಸದಿರುವುದು, ಕ್ರಮ ಕೈಗೊಳ್ಳದಿರುವುದು, ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸದೆ ಆಶ್ರಯ ನೀಡಲಾಗಿದೆ.
ಮೊದಲು ಸಂದಾಯವಾಗಿರುವ ರೂ.12 ಕೋಟಿ ತನ್ನ ಕೈಗೆ ಸಿಗದೆ ಅಧಿಕಾರಿ ಕೈಗೆ ಹೋಗಿದೆ. ಆದ್ದರಿಂದ ಒಂದೋ ಐಎಎಸ್ ಅಧಿಕಾರಿ ಕೈಯಿಂದ ಆ 12 ಕೋಟಿ ವಸೂಲಿ ಮಾಡಿ ಒಪ್ಪಿಸು, ಇಲ್ಲವೇ 12 ಕೋಟಿ ಜತೆಗೆ ಇನ್ನೂ 5 ಕೋಟಿ ಸೇರಿಸಿ ತಂದು ಕೊಡಬೇಕು. ಇಲ್ಲದಿದ್ದರೆ ಕೆಲಸ ನಿಲ್ಲಿಸು ವಿಜಯೇಂದ್ರ ಬೆದರಿಸಿದ್ದಾರೆ.
ಎರಡನೇ ಹಂತದಲ್ಲಿ ಗುತ್ತಿಗೆದಾರರಿಂದ ವಿಎಸ್‌ಟಿ ಸಂಗ್ರಹಿಸಲು ಮುಂದಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮರಡಿ ಮತ್ತು ಗುತ್ತಿಗೆದಾರರ ನಡುವಿನ ವಾಟ್ಸಾಪ್ ಚಾಟ್ ಅನ್ನೂ ಮಾಧ್ಯಮ ಸಂಸ್ಥೆ ಬಹಿರಂಗಗೊಳಿಸಿದೆ.
ಲಂಚದ ರೂ.7.4 ಕೋಟಿಯನ್ನು ತನ್ನ ಖಾತೆಗೆ ಆರ್‌ಟಿಜಿಎಸ್ ಮೂಲಕ ಜಮೆ ಮಾಡಿಸಿಕೊಂಡ ಶಶಿಧರ್ ಮರಡಿ, ಉಳಿದ ನಗದು ಹಣವನ್ನು ಮುಖ್ಯಮಂತ್ರಿಗಳ ಅಳಿಯನಿಗೆ ಹುಬ್ಬಳ್ಳಿಯಲ್ಲಿ ತಲುಪಿಸುವಂತೆ ಹೇಳಿರುವ ವಾಟ್ಸಾಪ್ ಚಾಟ್ ವಿವರವನ್ನು ಟಿವಿ ಚಾನೆಲ್ ಬಹಿರಂಗಪಡಿಸಿದೆ.
ಈ ಭ್ರಷ್ಟಾಚಾರವನ್ನು ಬಯಲಿಗೆಳೆದ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರು ಮತ್ತು ಪತ್ರಕರ್ತರಿಗೆ ಜೀವ ಬೆದರಿಕೆಯೊಡ್ಡಲಾಗುತ್ತಿದೆ. ಕಂಗನಾ ರಣಾವತ್ ಎಂಬ ನಟಿಗೆ ಬೆದರಿಕೆ ಇದೆಯೆಂದು “ವೈ’ ದರ್ಜೆ ಭದ್ರತೆ ನೀಡಲಾಗುತ್ತದೆ. ಹಗರಣವನ್ನು ಬಯಲಿಗೆಳೆದ ಪತ್ರಕರ್ತರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ಇದು ಪ್ರಜಾಪ್ರಭುತ್ವವೋ, ರಾಕ್ಷಸ ಪ್ರಭುತ್ವವೋ?" ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
"ಹೋಂ ನನ್ನ ಕೈಯಲ್ಲಿದೆ ಎನ್ನುವ ಮೂಲಕ ಗೃಹ ಇಲಾಖೆಯನ್ನು , ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಮಾಧ್ಯಮ ಕ್ಷೇತ್ರವನ್ನು ತಮ್ಮ ಬೆರಳ ತುದಿಯಲ್ಲಿ ನಿಯಂತ್ರಿಸುವ ಅಪಾಯಕಾರಿ ಹಂತಕ್ಕೆ ಸೂಪರ್ ಸಿಎಂ ಇಳಿದಿರುವುದು ಭಾರತೀಯ ಜನತಾ ಪಕ್ಷದ ಹೊಸ ಆಡಳಿತ ವೈಖರಿ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಈ ಆರೋಪಕ್ಕೆ ಯಡಿಯೂರಪ್ಪ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
PublicNext
23/09/2020 06:05 pm