ಪಬ್ಲಿಕ್ ನೆಕ್ಸ್ಟ್ ವಿಶ್ಲೇಷಣೆ- ರಹೀಂ ಉಜಿರೆ
ಇವತ್ತು ಪಿಎಫ್‌ಐ/ಎಸ್‌ಡಿಪಿಐ ಮೇಲೆ ನಡೆದ ಎನ್‌ಐಎ ದಾಳಿ ಮತ್ತು ನಾಯಕರ ಬಂಧನ ಅವರ ಕರ್ಮ. ತಪ್ಪು ಮಾಡಿದವರಿಗೆ ಜೈಲೂಟ ಇದ್ದೇ ಇದೆ. ನಿರಪರಾಧಿಗಳಾಗಿದ್ದರೆ ಕೋರ್ಟಿದೆ, ಸಾಬೀತು ಮಾಡಿ ಹೊರ ಬರಬಹುದು.
ವಿಷಯ ಅದಲ್ಲ. ಆದರೆ ಇವತ್ತು ಪಿಎಫ್ ಐ ಮತ್ತು ಎಸ್ ಡಿಪಿಐ ಮುಸಲ್ಮಾನರ ಸಂಘಟನೆ/ಪಕ್ಷ ಎಂದೇ ಬಿಂಬಿತವಾಗುತ್ತಿದೆ.ಈ ಎರಡೂ ಸಂಘಟನೆಗಳೂ ಕೂಡ ಈ ರೀತಿ ಬೆಂಬಿಸಲು ವ್ಯಾಪಕವಾಗಿ ಪ್ರಯತ್ನಿಸುತ್ತಿವೆ. ಈ ಪ್ರಯತ್ನವನ್ನು ಪ್ರಜ್ಞಾವಂತರು ವಿಫಲಗೊಳಿಸಬೇಕು. ಈ ಎರಡೂ ಸಂಘಟನೆಗಳ ರಾಜಕೀಯ ಮತ್ತು ಸಾಂಸ್ಕೃತಿಕ ಸಿದ್ಧಾಂತಗಳಿಗೂ ಮುಸಲ್ಮಾನರಿಗೂ ಯಾವುದೇ ಸಂಬಂಧ ಇಲ್ಲ.
ಹಿಜಾಬ್ ವಿಚಾರದಲ್ಲಿ ಈ ಸಂಘಟನೆಗಳ ನಡೆಗಳನ್ನು ಅತ್ಯಂತ ಹತ್ತಿರದಿಂದ ಗಮನಿಸಿದ್ದೇನೆ. ರಾಜಕೀಯಕ್ಕೆ ಧರ್ಮ ಮತ್ತು ಧರ್ಮಕ್ಕೆ ರಾಜಕೀಯ ಬೆರೆಸುವ ಈ ಸಂಘಟನೆ/ರಾಜಕೀಯ ಪಕ್ಷ ಮುಂದಿನ ದಿನಗಳಲ್ಲಿ ಸಮುದಾಯಕ್ಕೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಬಲ್ಲದು ಎಂಬ ವಾಸ್ತವವನ್ನು ಪ್ರಜ್ಞಾವಂತ ಮುಸಲ್ಮಾನರು ಮನಗಾಣಬೇಕು.
ಬಿಜೆಪಿ ಮತ್ತು ಆರ್‌ಎಸ್‌ಎಸ್‌ಅನ್ನು ಮಣಿಸಲೇಬೇಕೆಂಬ ಪ್ರತಿಷ್ಠೆ ಮತ್ತು ಜಿದ್ದಿಗೆ ಬಿದ್ದಿರುವ ಈ ಎರಡೂ ಸಂಘಟನೆಗಳು, ದಶಕಗಳಿಂದ ಸೌಹಾರ್ದ ಬಯಸುವ ಮತ್ತು ಹಲವು ದಶಕಗಳಿಂದ ಸೌಹಾರ್ದತೆಯಿಂದ ಬದುಕಿದ ಮುಸಲ್ಮಾನರ ಪಾಲಿಗೆ ಬೆದರುಗೊಂಬೆಯಾಗಿ ಕಾಡುತ್ತಲೇ ಇದೆ. ಕಳೆದ ಒಂದು ದಶಕದ ಸಾಂಸ್ಕೃತಿಕ ಸಂಘರ್ಷಗಳ ಇತಿಹಾಸ ಗಮನಿಸಿದಾಗ ಇದರ ಅರಿವಾಗುತ್ತದೆ.ಇವತ್ತು ಕಾಪು ಮತ್ತು ಉಡುಪಿಯಲ್ಲಿ ಪ್ರತಿಭಟನೆ ಹೆಸರಲ್ಲಿ ಈ ಸಂಘಟನೆಗಳು ದಿಢೀರ್ ಎಂದು ರಸ್ತೆ ತಡೆಗಿಳಿದದ್ದು ಅಕ್ಷಮ್ಯ. ಶಾಂತಿಯುತ ಪ್ರತಿಭಟನೆ ಎಲ್ಲರ ಹಕ್ಕು.ಆದರೆ ಪೊಲೀಸರ ಅನುಮತಿಯನ್ನೂ ಪಡೆಯದೆ ರಸ್ತೆ ತಡೆಗೆ ಮುಂದಾಗಿದ್ದು ಮತ್ತು ಪೊಲೀಸರಿಂದ ಲಾಠಿ ಚಾರ್ಜ್ ಗೊಳಗಾಗಿದ್ದು ಈ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರ ಭಂಡತನ ಮತ್ತು ಕಾನೂನು ವಿರೋಧಿ ನಡೆಯನ್ನು ಬಯಲು ಮಾಡಿದೆ. ಇವಿಷ್ಟು ಮುಸ್ಲಿಂ ಸಮುದಾಯದ ಯುವಕರಿಗಾಗಿ, ನಾನು ಬರೆಯಲೇಬೇಕಿದೆ!
PublicNext
23/09/2022 12:55 pm