ಮಂಡ್ಯ: ಲೋಕಲ್ ಚುನಾವಣೆ ಬಂದರೆ ಸಾಕು ನಮ್ಮ ನಮ್ಮ ವೈಯಕ್ತಿಕ ಸಂಬಂಧಗಳನ್ನೇ ಅದು ಹಾಳು ಮಾಡುತ್ತೆ. ಗ್ರಾ. ಪಂ ಚುನಾವಣೆ ಬಂದಿದ್ದೇ ತಡ, ಕುಟುಂಬಸ್ಥರ ನಡುವೆಯೇ ಶೀತಲ ಸಮರಗಳು ಈಗ ಶುರು ಆಗಿವೆ. ಅದಕ್ಕೆ ಮುನ್ನುಡಿ ಎಂಬಂತೆ ಮಂಡ್ಯದಲ್ಲಿ ಅಕ್ಕ- ತಮ್ಮ ಜಗಳ ನಡೆದಿದೆ.
ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವೇಳೆ ಈ ಗಲಾಟೆ ನಡೆದಿದೆ. ಚುನಾವಣೆಗಾಗಿ ಸ್ವಂತ ಕುಟುಂಬಸ್ಥರ ನಡುವೆ ಕಿತ್ತಾಟ ನಡೆದಿದೆ. ಎಲೆಕ್ಷನ್ ವಿಚಾರವಾಗಿ ಸ್ವಂತ ಅಕ್ಕನ ಮೇಲೆ ತಮ್ಮನೇ ಹಲ್ಲೆ ಮಾಡಿದ್ದಾನೆ.
ಸಹಕಾರ ಸಂಘದ ಸದಸ್ಯರಾಗಿರುವ ಶಾರದಮ್ಮಗೆ ಸಹೋದರ ರಾಜೇಗೌಡ ಬಂಕಾಪುರದ ಅಭ್ಯರ್ಥಿ ಬೆಂಬಲಿಸುವಂತೆ ಮನವಿ ಮಾಡಿದ್ದನು. ಈ ವೇಳೆ ಶಾರದಮ್ಮ, ನಾನು ಬಂಕಾಪುರದ ಹೆಣ್ಣು ಮಗಳಾದರೂ ಮದುವೆ ಬಳಿಕ ಗೊಲ್ಲರಹಳ್ಳಿ ಸೊಸೆಯಾಗಿದ್ದೇನೆ. ಹೀಗಾಗಿ ನಾನು ನಿಮ್ಮೂರಿಗೆ ಬೆಂಬಲ ನೀಡಲ್ಲ ಎಂದು ಖಾರವಾಗಿಯೇ ತಿಳಿಸಿದ್ದಾರೆ.
ಅಕ್ಕನ ಮಾತಿನಿಂದ ಅಸಮಾಧಾನಗೊಂಡ ರಾಜೇಗೌಡ, ತನ್ನ ಅಕ್ಕ ಶಾರದಮ್ಮ ಮೇಲೆ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲ. ಚುನಾವಣೆಗೆ ತೆರಳದಂತೆ ಅಕ್ಕನನ್ನು ಹಿಡಿದು ಎಳೆದಾಡಿದ್ದಾನೆ. ಬಳಿಕ ಶಾರದಮ್ಮ ಪುತ್ರನ ಮಧ್ಯಪ್ರವೇಶದಿಂದ ಜಗಳ ತಣ್ಣಗಾಗಿದೆ.
PublicNext
04/12/2020 10:37 am