ಬೆಂಗಳೂರು: ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿ ಮತ್ತು ಸ್ವಾಮಿ ವಿವೇಕಾನಂದ ಅವರ ಹಿಂದುತ್ವ ವಿಚಾರಗಳ ಮೇಲೆ ನಂಬಿಕೆ ಇರಿಸಿದೆ ಹೊರತು, ಬಿಜೆಪಿಯವರು ಪ್ರತಿಪಾದಿಸುವ ವೀರಸಾವರ್ಕರ್ ಹಿಂದತ್ವ ನಮಗೆ ಒಪ್ಪಿತವಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಡಿ ಕೆ ಶಿವಕುಮಾರ್ ಅವರು ಅಚಾನಕ್ಕಾಗಿ ಈ ರೀತಿ ಹೇಳಿದರೋ ಅಥವಾ ಉದ್ದೇಶಪೂರ್ವಕವಾಗಿ ಹೇಳಿದರೊ ತಿಳಿಯದು. ಆದರೆ ಈ ಹೇಳಿಕೆ ಮಾತ್ರ ಕಾಂಗ್ರೆಸ್ ನಾಯಕರಲ್ಲಿ ತಳಮಳ ಸೃಷ್ಟಿಸಿದೆ, ಎರಡು ಸಿದ್ದಾಂತಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳಲು ಪರದಾಡುತ್ತಿದ್ದಾರೆ.
ಇತ್ತೀಚಿನ ಚುನಾವಣೆಗಳಲ್ಲಿ ಸಾಲು ಸಾಲು ಸೋಲುಗಳಿಂದ ಭ್ರಮನಿರಸನಗೊಂಡಿರುವ ಕಾಂಗ್ರೆಸ್ ನಾಯಕರು ಹಿಂದುತ್ವದ ಮೊರೆ ಹೋಗುತ್ತಿದ್ದಾರಾ? ಎನ್ನುವ ಪ್ರಶ್ನೆಗಳು ಎದ್ದಿವೆ. ಕಾಂಗ್ರೆಸ್ಸಿನವರಿಗೆ ಹಿಂದೂಗಳ ಮತ ಅತ್ಯವಶ್ಯಕವಾಗಿದೆ, ಹೀಗಾಗಿ ಅವರು ಟೆಂಪಲ್ ರನ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ. ಮತದಾರರು ಮತ ಹಾಕುವುದು ಸಂಪೂರ್ಣವಾಗಿ ಹಿಂದುತ್ವಕ್ಕೆ ಬದ್ಧರಾಗಿರುವವರಿಗೆ ಹೊರತು ಹೇಳಿಕೆಗಳನ್ನು ನೀಡುವವರಿಗಲ್ಲ ಎಂದು ಹೇಳಿದ್ದಾರೆ.
ಇನ್ನು ಡಿ ಕೆ ಶಿವಕುಮಾರ್ ಹೇಳಿಕೆಯಿಂದ ಉಂಟಾಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿರುವ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್, ನಾನು ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ, ಅವರು ಅರ್ಥೈಸಿದ್ದು ಹಿಂದೂ ಧರ್ಮವನ್ನೇ ಹೊರತು ಹಿಂದುತ್ವವನ್ನಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಹಿಂದೂತ್ವವು ಹಿಂದೂ ಧರ್ಮದ ವಿಸ್ತಾರವನ್ನು ಸರಿಹೊಂದಿಸಲಾಗದ ಪದವಾಗಿದೆ ಎಂದು ಬಿ ಕೆ ಹರಿಪ್ರಸಾದ್ ಸ್ಪಷ್ಟಪಡಿಸಿದರು.
PublicNext
03/12/2020 03:40 pm