ಹೊಸದಿಲ್ಲಿ: ಸಾಲು-ಸಾಲು ಸೋಲುಗಳಿಂದ ಕಾಂಗ್ರೆಸ್ ಪಕ್ಷ ಸದ್ಯದ ಮಟ್ಟಿಗೆ ಕಂಗೆಟ್ಟಿದೆ. ಅದರಲ್ಲೂ ಬಿಹಾರ ವಿಧಾನಸಭಾ ಚುನಾವಣೆಯ ಸೋಲು ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀನಾಯ ಸೋಲುಗಳಿಂದ ಪಕ್ಷದ ಹಿರಿಯ ನಾಯಕರು ಇದೀಗ ಉನ್ನತ ನಾಯಕತ್ವದ ವಿರುದ್ಧ ಅಪಸ್ವರ ಎತ್ತಲು ಆರಂಭಿಸಿದ್ದಾರೆ.
ಕಪಿಲ್ ಸಿಬಲ್ ಬಳಿಕ ಇದೀಗ ಕಾಂಗ್ರೆಸ್ ಉನ್ನತ ನಾಯಕತ್ವದ ನಿಷ್ಕ್ರಿಯತೆಯನ್ನು ಟೀಕಿಸಿರುವ ಮತ್ತೋರ್ವ ಹಿರಿಯ ನಾಯಕ ಪಿ. ಚಿದಂಬರಂ, ಕಾಂಗ್ರೆಸ್ ಕೆಳಮಟ್ಟದಲ್ಲಿ ಸಾಂಸ್ಥಿಕ ಉಪಸ್ಥಿತಿ ಕಳೆದುಕೊಂಡಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣಾ ಸೋಲಿಗಿಂತಲೂ ಹಲವು ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಇದು ತಮ್ಮನ್ನು ಚಿಂತೆಗೀಡು ಮಾಡಿದೆ ಎಂದು ಪಿ. ಚಿದಂಬರಂ ಹೇಳಿದ್ದಾರೆ. ಈ ಉಪಚುನಾವಣೆಗಳ ಸೋಲು, ಕಾಂಗ್ರೆಸ್ ಕೆಳಮಟ್ಟದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಪಿ. ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.
PublicNext
18/11/2020 04:34 pm