ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಷಯ ರಾಜ್ಯದಲ್ಲಿ ಆಕ್ರೋಶಕ್ಕೆ ಗುರಿಯಾಗಿರುವಂತೆಯೇ, ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ತೀರ್ಮಾನಿಸುವ ಮೂಲಕ ರಾಜ್ಯ ಸರ್ಕಾರ ವಿವಾದದ ಜೇನುಗೂಡಿಗೆ ಕೈಹಾಕಿದೆ. ಈ ನಿರ್ಣಯಕ್ಕೆ ವಿರೋಧ ವ್ಯಕ್ತವಾಗುತ್ತಿರುವ ನಡುವೆ, ಇತರ ಹಲವು ಜಾತಿಗಳೂ ಪ್ರತ್ಯೇಕ ನಿಗಮಕ್ಕೆ ಆಗ್ರಹಿಸತೊಡಗಿರುವುದು ಸರ್ಕಾರದ ತಲೆನೋವು ಹೆಚ್ಚಿಸಿದೆ.
ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡುತ್ತಿದ್ದಂತೆ ರಾಜ್ಯದ ಹಲವು ಮಠಾಧೀಶರು, ನಾಗರಿಕರು, ರಾಜಕೀಯ ಪಕ್ಷಗಳ ಮುಖಂಡರು ವಿರೋಧ ಸೂಚಿಸಿದ್ದಾರೆ; ನಿಗಮ ಸ್ಥಾಪನೆಯಿಂದ ಸಾಧಿಸುವುದಾದರೂ ಏನು ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ. ಮುಂದಿನ ಉಪ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾಧಿಕಾರ ಹಾಗೂ ನಿಗಮಗಳ ಸ್ಥಾಪನೆಗೆ ಕೈಗೊಂಡಿರುವ ನಿರ್ಧಾರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಸಿಎಂ ಅದರಿಂದ ಯಾವ ರೀತಿ ಪಾರಾಗುತ್ತಾರೆಂಬುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೂ ಕಾರಣವಾಗಿದೆ.
ಭುಗಿಲೆದ್ದ ಬೇಡಿಕೆ ಪ್ರತಿಧ್ವನಿ
ಮರಾಠ ಅಭಿವೃದ್ಧಿ ಪ್ರಾಧಿಕಾರ ಹಾಗೂ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಿರ್ಧಾರ ಕೈಗೊಳ್ಳುತ್ತಿದ್ದಂತೆ ಮತ್ತಷ್ಟು ಜಾತಿಗಳಿಂದ ಒತ್ತಡ ಹೆಚ್ಚಾಗಿದೆ. ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಅನೇಕ ಜಾತಿಗಳು ಹಿಂದಿನಿಂದಲೂ ಸರ್ಕಾರದ ಮೇಲೆ ನಿಗಮಗಳ ಸ್ಥಾಪನೆಗೆ ಒತ್ತಡ ಹಾಕುತ್ತಲೇ ಇವೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಒಕ್ಕಲಿಗ ನಿಗಮ ಮಾಡುವಂತೆ ಸಿಎಂಗೆ ಮನವಿ ನೀಡುವುದಾಗಿ ಹೇಳಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅನೇಕ ಹಿಂದುಳಿದ ಜಾತಿಗಳಿದ್ದು ಅವುಗಳಿಗೂ ಅಭಿವೃದ್ಧಿ ನಿಗಮ ರಚನೆಯಾಗಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ನಿಗಮಗಳ ಸಾಧನೆ ಏನು?
ರಾಜ್ಯದಲ್ಲಿ ಒಟ್ಟಾರೆ 76 ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಿವೆ. ಆದರೆ ಬಹುತೇಕ ನಿಗಮಗಳು ಸರ್ಕಾರದ ಪಾಲಿಗೆ ಬಿಳಿಯಾನೆಗಳೇ ಆಗಿವೆ. ಕೆಲವು ಮಾತ್ರ ಲಾಭದಲ್ಲಿವೆ. ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರಿಯಾದ ಕಚೇರಿಯೂ ಇಲ್ಲದೆ ಬಹುಮಹಡಿ ಕಟ್ಟಡದ ಕಾರು ಗ್ಯಾರೇಜಿನಲ್ಲಿದೆ. ಬಹಳಷ್ಟು ನಿಗಮಗಳ ಸ್ಥಿತಿ ಇದೇ ಆಗಿದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಆರ್ಥಿಕ ಅಭಿವೃದ್ಧಿ ಸಾಧಿಸುವ ಬದಲು ಮತ್ತಷ್ಟು ದುಂದುವೆಚ್ಚ ಮಾಡುವುದೇಕೆ ಎಂದು ಸರ್ಕಾರದ ನಿರ್ಧಾರಕ್ಕೆ ಟೀಕೆ ಕೇಳಿಬರುತ್ತಿದೆ.
ಕಾರಣ, ಬೇಡಿಕೆ?
ಮುಂದೆ ಬರಲಿರುವ 3 ಉಪ ಚುನಾವಣೆ ಗಮನದಲ್ಲಿರಿಸಿ ನಿರ್ಧಾರ.
ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ನಿರ್ಧಾರದಿಂದ ಶಿರಾದಲ್ಲಿ ಗೆಲ್ಲಲು ಸಾಧ್ಯವಾಯಿತು. ಅದೇ ತಂತ್ರ ಮುಂದುವರಿಕೆ.
ನಿಗಮ ಸ್ಥಾಪನೆಗೆ ಸರ್ಕಾರ ನಿರ್ಧಾರ ಮಾಡುತ್ತಿದ್ದಂತೆ 5000 ಕೋಟಿ ರೂ. ಮೀಸಲಿಡಬೇಕು ಮತ್ತು ಲಿಂಗಾಯತ ಸಮುದಾಯಕ್ಕೆ ಶೇ.18 ಮೀಸಲಾತಿ ನೀಡಬೇಕೆಂಬ ಬೇಡಿಕೆ ಎದ್ದಿದೆ.
ವಿರೋಧ ಏಕೆ?
ಜಾತಿ ಓಲೈಸುವುದಕ್ಕೆ ನಾಗರಿಕರ ತೆರಿಗೆ ಹಣ ಪೋಲಾಗಬಾರದು.
ನಿಗಮಗಳ ಆಡಳಿತಾತ್ಮಕ ವೆಚ್ಚವೇ ಕೋಟ್ಯಂತರ ರೂ.ಗಳಾಗುತ್ತದೆ.
ಸಾಲ ಮಿತಿ ಮೀರಿ ಹೆಚ್ಚಾಗುತ್ತದೆ.
ಇಡೀ ಸಮುದಾಯದ ಅಭಿವೃದ್ಧಿ ಆಸಾಧ್ಯ. ನಿಗಮ ಬದಲು ಆಯಾ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ, ಅಭಿವೃದ್ಧಿಗೆ ಯೋಜನೆಗಳನ್ನು ತರಬಹುದು.
ಡಿ.5ಕ್ಕೆ ಕರ್ನಾಟಕ ಬಂದ್?
ಮರಾಠ ಪ್ರಾಧಿಕಾರಕ್ಕೆ 50 ಕೋಟಿ ರೂ.ಗಳನ್ನು ನೀಡಲು ಸರ್ಕಾರ ನೀಡಲು ಮುಂದಾಗಿರುವುದು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ 30 ಸಾವಿರದಷ್ಟಿರುವ ಮರಾಠಿಗರ ಮತ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮರಾಠಿಗರ ಮತಗಳ ಮೇಲೆ ಕಣ್ಣಿಟ್ಟು ಈ ನಿಗಮ ಸ್ಥಾಪನೆಗೆ ಮುಂದಾಗಲಾಗಿದೆ ಎಂದು ಟೀಕೆ ವ್ಯಕ್ತವಾಗುತ್ತಿದೆ. ಡಿ. 5ರಂದು ರಾಜ್ಯ ಬಂದ್ ಮಾಡಲು ಕನ್ನಡಪರ ಸಂಘಟನೆಗಳು ಮುಂದಾಗಿವೆ. ಹಿಂದೆ ಮರಾಠಿಗರ ಪ್ರಾಬಲ್ಯ ಕಡಿಮೆ ಮಾಡುವುದಕ್ಕೆ ಸಂಬಂಧಿಸಿದಂತೆಯೇ ಗೋಕಾಕ್ ಚಳವಳಿ ನಡೆದಿತ್ತು. ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಗಡಿ ವಿವಾದ ಇನ್ನೂ ಬಗೆ ಹರಿದಿಲ್ಲ. ಎಂಇಎಸ್ ಆಗಾಗ ಗಡಿ ವಿವಾದ ಕೆದಕುತ್ತಲೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಪ್ರಾಧಿಕಾರದ ಅಗತ್ಯವೇನು ಎಂಬುದು ಸಂಘಟನೆಗಳ ಪ್ರಶ್ನೆ.
ರಾಜ್ಯದಲ್ಲಿರುವ ಮರಾಠ ಜನಾಂಗದವರ ಅಭಿವೃದ್ಧಿಗಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ಉದ್ದೇಶಿಸಲಾಗಿದೆ. ಮರಾಠಿ ಭಾಷೆಗೂ ಪ್ರಾಧಿಕಾರಕ್ಕೂ ಸಂಬಂಧವಿಲ್ಲ. ಮರಾಠ ಜನಾಂಗದವರು ತಲಾತಲಾಂತರಗಳಿಂದ ಕರ್ನಾಟಕದಲ್ಲಿಯೇ ವಾಸವಾಗಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಅವರ ಸರ್ವತೋಮುಖ ಅಭಿವೃದ್ಧಿಯಾಗಬೇಕು ಎನ್ನುವ ಆಶಯದಿಂದ ಈ ಪ್ರಾಧಿಕಾರ ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ.
| ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ
ರಾಜ್ಯದಲ್ಲಿ ಇನ್ನೂ ಹಲವಾರು ಹಿಂದುಳಿದ ಸಮುದಾಯಗಳಿವೆ. ಅವುಗಳ ಅಭಿವೃದ್ಧಿಗೂ ಸರ್ಕಾರ ಪ್ರಾಧಿಕಾರ ರಚನೆ ಮಾಡಲಿ. ಮತ ಓಲೈಕೆ ಕಾರಣಕ್ಕಾಗಿ ಯಾವುದೋ ಒಂದು ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ಱ ನೀಡುವುದು ಸರಿಯಲ್ಲ.
| ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕ
ನಿಗಮಗಳ ಸ್ಥಾಪನೆಗೆ ಸಂಬಂಧಿಸಿದಂತೆ ನಾನು ಒಬ್ಬನೇ ಯಾವುದೇ ಅಭಿಪ್ರಾಯ ನೀಡುವುದಿಲ್ಲ. ಪಕ್ಷದ ಮುಖಂಡರೊಂದಿಗೆ ನ.30ಕ್ಕೆ ಸಭೆ ನಡೆಸಲಿದ್ದೇವೆ. ಆ ನಂತರ ಮಾತನಾಡೋಣ.
| ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಆಶ್ಚರ್ಯ ಎನಿಸುತ್ತದೆ. ಜಾತಿಗೊಂದು ಪ್ರಾಧಿಕಾರ ರಚಿಸುತ್ತಾ ಹೋದರೆ ಮುಂದೆ ಪ್ರತಿಯೊಬ್ಬರೂ ಕೇಳುತ್ತಾರೆ. ಇದರ ಬದಲು ಸರ್ಕಾರ ಎಲ್ಲ ಜಾತಿಯಲ್ಲಿರುವ ಹಿಂದುಳಿದವರಿಗೆ ಒತ್ತು ಕೊಡುವ ಕೆಲಸ ಮಾಡಿದರೆ ಒಳ್ಳೆಯದು. ಸರ್ಕಾರ ಇರುವುದು ರಾಜ್ಯದ ಅಭಿವೃದ್ಧಿಗಾಗಿ. ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗದಲ್ಲಿ ಅವಕಾಶ ಕೊಡುವ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಸಂತೋಷ.
| ಸಿದ್ದಲಿಂಗ ಶ್ರೀಗಳು ಮಠಾಧ್ಯಕ್ಷರು, ಸಿದ್ಧಗಂಗಾ ಮಠ
ಓಲೈಕೆ ರಾಜಕಾರಣ ಬೇಡ; ಸರ್ಕಾರಕ್ಕೆ ಡಾ. ವಿಜಯ ಸಂಕೇಶ್ವರ ಮನವಿ
ಹುಬ್ಬಳ್ಳಿ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹಿರಿಯ ಉದ್ಯಮಿ, ಲೋಕಸಭೆ ಮಾಜಿ ಸದಸ್ಯ ಡಾ.ವಿಜಯ ಸಂಕೇಶ್ವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾತಿಗೊಂದು ನಿಗಮ ಸ್ಥಾಪನೆ ಸರಿಯಾದುದಲ್ಲ. ಈ ರೀತಿಯ ಸಮಾಜ ಒಡೆಯುವ ಕೆಲಸವನ್ನು ಯಾವ ರಾಜಕೀಯ ಪಕ್ಷವೂ ಮಾಡಬಾರದು. ತೆರಿಗೆದಾರರು ಬೆವರು ಸುರಿಸಿ ಸಂಪಾದಿಸಿದ ಹಣ ಅನಗತ್ಯ ರಾಜಕೀಯ ಚಟುವಟಿಕೆಗಳಿಗೆ ಪೋಲಾಗದೆ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗಬೇಕು. ನಿಗಮ ಸ್ಥಾಪನೆಯಿಂದ ಒಂದಿಬ್ಬರಿಗೆ ಪುನರ್ವಸತಿಯಾಗುವುದೇ ಹೊರತು ಯಾವ ಜನಾಂಗವೂ ಅಭಿವೃದ್ಧಿ ಕಾಣುವುದಿಲ್ಲ ಎಂದು ಅವರು ಹೇಳಿದ್ದಾರೆ.
ಉಚಿತ ಆಹಾರ ಧಾನ್ಯ ವಿತರಣೆ, ವಿಪರೀತ ಸಾಲಮನ್ನಾದಂತಹ ಘೊಷಣೆಗಳ ಬದಲು ಸಾಮಾನ್ಯ ಜನರಿಗೂ ನಿಲುಕುವ ಮೂಲಸೌಲಭ್ಯಗಳನ್ನು ಅಭಿವೃದ್ಧಿಗೆ ಪೂರಕವಾಗಿ ಜಾರಿ ಮಾಡಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ಓಲೈಕೆ ರಾಜಕಾರಣ ಮುಂದುವರಿಸಿದರೆ ಆರ್ಥಿಕ ಸಂಕಷ್ಟ ಎದುರಿಸಬೇಕಾದೀತು. ಶಿಕ್ಷಣ, ಪೊಲೀಸ್ ಇಲಾಖೆ ಸೇರಿ ತೀರಾ ಅಗತ್ಯವಿರುವ ಕಡೆ ಸಿಬ್ಬಂದಿ ಸಮಸ್ಯೆ ಇದೆ. ಅಲ್ಲಿ ನೇಮಕಾತಿಗಳು ನಡೆದು ಜನಸಾಮಾನ್ಯರಿಗೆ ಸರ್ಕಾರದ ಸವಲತ್ತುಗಳು ಸರಿಯಾಗಿ ಸಿಗಬೇಕಿದೆ. ಅಂಗನವಾಡಿ ಕಾರ್ಯಕರ್ತೆಯರು ಸಣ್ಣ ವೇತನಕ್ಕಾಗಿ ಪ್ರತಿಭಟನೆ ನಡೆಸುವ ಸ್ಥಿತಿ ಇರುವಾಗ ಸಮುದಾಯಕ್ಕೊಂದು ನಿಗಮ ರಚನೆ ಮಾಡುವುದು ಅರ್ಥಹೀನ ಎಂದು ಡಾ. ಸಂಕೇಶ್ವರ ಹೇಳಿದ್ದಾರೆ.
ಕೃಪೆ: ವಿಜಯವಾಣಿ
PublicNext
18/11/2020 07:58 am