ದಾವಣಗೆರೆ: ಬ್ಯಾಂಡ್ ಬಾರಿಸಿ ತಮಟೆ ಬಾರಿಸಿ ಬಾಯಿ ಬಡ್ಕೊಂಡ್ರೆ ಯಾರಿಗೂ ಸಚಿವ ಸ್ಥಾನ ಸಿಗೋದಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯ ವಿಚಾರವಾಗಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಜಿಲ್ಲೆಯಲ್ಲಿರುವ ಎಲ್ಲ ಶಾಸಕರ ಸಭೆ ಮಾಡಿ ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡುವಂತೆ ಸಿಎಂಗೆ ಒತ್ತಾಯ ಮಾಡಿದ್ದೇವೆ. ಇದರಲ್ಲಿ ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ದಾವಣಗೆರೆ ನಗರ ಮಧ್ಯ ಕರ್ನಾಟಕದಲ್ಲಿದೆ. ಇದಕ್ಕೆ ರಾಜಧಾನಿ ಆಗುವ ಅರ್ಹತೆ ಇದೆ. ದಾವಣಗೆರೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹೈದ್ರಾಬಾದ್ ಕರ್ನಾಟಕ ಸಂಪರ್ಕ ಸೇತುವೆಯಾಗಿದೆ. ಹೀಗಾಗಿ ಪ್ರಾದೇಶಿಕ ಸಮತೋಲನದ ಆಧಾರದ ಮೇಲೆ ಸಚಿವ ಸ್ಥಾನ ನೀಡಬೇಕು. ಬ್ಯಾಂಡ್ ಬಾರಿಸಿ ತಮಟೆ ಬಾರಿಸಿ ಬಾಯಿ ಬಡೆದುಕೊಂಡರೆ ಯಾರಿಗೂ ಸಚಿವ ಸ್ಥಾನ ಸಿಗಲ್ಲ. ರಾಜಕೀಯವಾಗಿ ನಾವು ಯಾರೂ ಸನ್ಯಾಸಿಗಳಲ್ಲ. ಎಲ್ಲರೂ ಒಗ್ಗಟ್ಟಾಗಿ ಜಿಲ್ಲೆಗೆ ಸಚಿವ ಸ್ಥಾನ ಬೇಕು ಅಂತ ಕೇಳಿದ್ದೇವೆ.
ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ಸಚಿವ ಆಗಬೇಕು ಎಂದು ಜನರ ಅಪೇಕ್ಷೆ ಇದೆ. ಮುಖ್ಯಮಂತ್ರಿಗಳು ಯಾವುದೇ ನಿರ್ಧಾರ ತಗೊಂಡರೂ ಅದಕ್ಕೆ ನಾವು ಬದ್ಧರಾಗಿದ್ದೇವೆ. ಹೀಗಾಗಿ ಹಾದಿ ರಂಪ ಬೀದಿ ರಂಪ ಮಾಡೋದು ನಮಗೆ ಇಷ್ಟ ಇಲ್ಲ ಎಂದರು.
PublicNext
16/11/2020 02:37 pm