ಇಡೀ ದೇಶದ ಗಮನ ಸೆಳೆದಿದ್ದ ಬಿಹಾರ ವಿಧಾನಸಭೆಯ ರೋಚಕ ಫಲಿತಾಂಶ ಕುತೂಹಲಕರ ಬೆಳವಣಿಗೆಗೂ ಸಾಕ್ಷಿಯಾಗಿದೆ! ಬಿಹಾರದ ಎನ್‌ಡಿಎ ಪಾಳಯದಲ್ಲಿ ಸಂಯುಕ್ತ ಜನತಾ ದಳ(ಜೆಡಿಯು)ಕ್ಕೆ ಇದುವರೆಗೂ ಹಿರಿಯಣ್ಣನ ಸ್ಥಾನವಿತ್ತು. ಜೆಡಿಯು ಹೊರತುಪಡಿಸಿದರೆ, ಬಿಜೆಪಿಗೆ ಅಂಥ ಮಹತ್ವ ಇದ್ದಿರಲಿಲ್ಲ. ಆದರೆ ಇದೇ ಮೊಟ್ಟ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿನ ಅಲೆಯಲ್ಲಿ ಬಿಜೆಪಿಯೇ ತಾನು ಸ್ಪರ್ಧಿಸಿದ್ದ 110 ಸೀಟುಗಳ ಪೈಕಿ 74ರಲ್ಲಿಗೆದ್ದು ಮುನ್ನೆಲೆಗೆ ಬಂದಿದೆ. ಅಷ್ಟೇ ಅಲ್ಲದೆ ಕಳೆದ 15 ವರ್ಷಗಳಿಂದಲೂ ಬಿಹಾರವನ್ನು ಆಳುತ್ತಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರಕಾರದ ವಿರುದ್ಧ ಸಹಜವಾಗಿ ಉಂಟಾಗಿದ್ದ ಆಡಳಿತ ವಿರೋಧಿ ಅಲೆ, ಅನಿರೀಕ್ಷಿತ ಕೋವಿಡ್-19 ಬಿಕ್ಕಟ್ಟು ಹಾಗೂ ಯುವ ರಾಜಕಾರಣಿ ತೇಜಸ್ವಿ ಯಾದವ್ ಅವರ ಸಂಚಲನದ ನಡುವೆಯೂ ಗೆಲುವಿನ ದಡ ಮುಟ್ಟಿಸಿದೆ. ಸಂಯುಕ್ತ ಜನತಾ ದಳ 43ಕ್ಕೆ ಇಳಿದಿದೆ. ಟ್ವೆಂಟಿ 20 ಕ್ರಿಕೆಟ್ ಮ್ಯಾಚಿಗೆ ಕಡಿಮೆ ಇಲ್ಲದಷ್ಟು ತೀವ್ರ ಪೈಪೋಟಿಯಲ್ಲಿ ನಡೆದ ಚುನಾವಣೆಯಲ್ಲಿ ಅಂತಿಮವಾಗಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದು ಪ್ರಧಾನಿ ನರೇಂದ್ರ ಮೋದಿಯವರೇ.
ಕೋವಿಡ್-19 ಬಿಕ್ಕಟ್ಟಿನ ಪರಿಣಾಮ ಲಕ್ಷಾಂತರ ಮಂದಿ ಯುವಜನತೆ ಬಿಹಾರಕ್ಕೆ ಹಿಂತಿರುಗಿದ್ದರು. ಹೀಗಾಗಿ ಲಾಕ್‌ಡೌನ್ ಅವಧಿಯಲ್ಲಿ ನಿರುದ್ಯೋಗ ಸಮಸ್ಯೆಯೂ ಅಲ್ಲಿ ಬಿಗಡಾಯಿಸಿತ್ತು. ಹೀಗಿದ್ದರೂ, ಮೋದಿ ಸರಕಾರ ಕಳೆದ 6 ವರ್ಷಗಳಿಂದ ಬಿಹಾರದ ಪ್ರಗತಿಗೆ, ವಿಕಾಸಕ್ಕೆ ಸಲ್ಲಿಸಿರುವ ಕೊಡುಗೆಗಳು ಕೈ ಹಿಡಿದಿವೆ. 'ಎನ್‌ಡಿಎಗೆ ಎದುರಾಗಿದ್ದ ಆಪತ್ತನ್ನು ಪ್ರಧಾನಿ ನರೇಂದ್ರ ಮೋದಿಯವರು ವಿಷಕಂಠನಂತೆ ಕುಡಿದು ನಿವಾರಿಸಿದರು' ಎನ್ನುತ್ತಾರೆ ವಿಶ್ಲೇಷಕರು. 2014ರಿಂದೀಚೆಗೆ ಬಿಜೆಪಿಗೆ ಹಲವು ರಾಜ್ಯಗಳಲ್ಲಿ ಹಿನ್ನಡೆಯಾಗಿದ್ದರೂ, ಈಗಲೂ ಮೋದಿ ಅಲೆ ನಾನಾ ರಾಜ್ಯಗಳಲ್ಲಿ ಸಹಕಾರಿಯಾಗಬಹುದು. ನಿರುದ್ಯೋಗ, ಕೋವಿಡ್-19, ಆರ್ಥಿಕ ಬಿಕ್ಕಟ್ಟು, ವಲಸೆ ಇತ್ಯಾದಿ ಸಾರ್ವತ್ರಿಕ ಸಮಸ್ಯೆಗಳ ನಿವಾರಣೆಗೆ ಮೋದಿ ನಾಯಕತ್ವದಲ್ಲಿ ಮತದಾರರು ನಂಬಿಕೆ ಇಟ್ಟಿರುವುದನ್ನು ಚುನಾವಣೆ ಫಲಿತಾಂಶ ಬಿಂಬಿಸಿದೆ. ಒಂದೊಮ್ಮೆ ಮೋದಿಯವರು ವಿಫಲರಾಗುತ್ತಿದ್ದರೆ, ಪಕ್ಷಕ್ಕೆ ಗಂಭೀರ ಹಾನಿಯಾಗುವ, ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಅನಾನುಕೂಲವಾಗುವ ರಿಸ್ಕ್ ಇತ್ತು.
ಜಂಗಲ್ ರಾಜ್ ಬಗ್ಗೆ ಹುಷಾರ್, ಡಬಲ್ ಎಂಜಿನ್‌ಗೆ ಬಹು ಪರಾಕ್!
ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ ಲಾಲು-ರಾಬ್ಡಿ ಸರಕಾರದಲ್ಲಿನ ಕರಾಳ ದುರಾಡಳಿತವನ್ನು(ಜಂಗಲ್‌ರಾಜ್) ಪದೇಪದೆ ನೆನಪಿಸಿದ್ದರು. ಜಂಗಲ್ ಕಾ ಯುವರಾಜ್ ಬಂದರೆ ಕಷ್ಟ ಎಂದು ಆರ್‌ಜೆಡಿಯ ನಾಯಕ ತೇಜಸ್ವಿ ಯಾದವ್ ಅವರನ್ನು ಟೀಕಿಸಿದ್ದರು. ಜತೆಗೆ ರಾಮ ಮಂದಿರ ನಿರ್ಮಾಣ ಆರಂಭವಾಗಿರುವುದು, ರಾಮಾಯಣ ಸಕ್ರ್ಯೂಟ್ ಯೋಜನೆಯಡಿಯಲ್ಲಿಮಿಥಿಲಾಂಚಲದ ಪ್ರವಾಸೋದ್ಯಮ ಅಭಿವೃದ್ಧಿ, 55 ಸಾವಿರ ಕೋಟಿ ರೂ.ಗಳ ರಸ್ತೆ ಜಾಲ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದರು. ಎನ್‌ಡಿಎ ಅಧಿಕಾರಕ್ಕೆ ಪುನರಾಯ್ಕೆಯಾದರೆ ಕೇಂದ್ರದಲ್ಲೂ ಎನ್‌ಡಿಎ ಇರುವುದರಿಂದ ಡಬಲ್ ಎಂಜಿನ್‌ನಂತೆ ರಾಜ್ಯದ ಪ್ರಗತಿಗೆ ಸಹಾಯಕ ಎಂದು ಒತ್ತಿ ಹೇಳಿದ್ದರು.
ಜಾತಿ ಮತ್ತು ಸಮುದಾಯಗಳ ಸಮೀಕರಣ
ಆರ್‌ಜೆಡಿ ನೇತೃತ್ವದ ಮಹಾ ಘಟಬಂಧನಕ್ಕೆ ಮುಸ್ಲಿಮ್ ಮತ್ತು ಯಾದವ ಸಮುದಾಯದ ಮತದಾರರ ಒಲವು ಇತ್ತು. ಎನ್‌ಡಿಎ ಮುಖ್ಯವಾಗಿ ಕುರ್ಮಿ ಸಮುದಾಯ, ತೀರಾ ಹಿಂದುಳಿದ ಜಾತಿಗಳು (ಇಬಿಸಿ) ಮತ್ತು ಮೇಲ್ವರ್ಗದ ಮತ ಬ್ಯಾಂಕ್ ಬೆಂಬಲಿಸಿತ್ತು. ಈ ಸಲ ಹಿಂದೂಗಳ ಮತಗಳೂ ಎನ್‌ಡಿಎ ಪರ ಧ್ರುವೀಕರಣವಾಗಿತ್ತು ಎನ್ನುತ್ತಾರೆ ವಿಶ್ಲೇಷಕರು. 'ಜಂಗಲ್ ರಾಜ್'ನ ನಾಯಕರು ಭಾರತ ಮಾತೆ, ಜೈ ಶ್ರೀರಾಮ್ ಘೋಷಣೆ ಹೇಳಲು ನಿರಾಕರಿಸುತ್ತಾರೆ ಎಂಬುದನ್ನು ಪ್ರಧಾನಿ ಮೋದಿ ಬೊಟ್ಟು ಮಾಡಿದ್ದರು. ಸೀಮಾಂಚಲ ಮತ್ತು ಮಿಥಿಲಾಂಚಲ ವಲಯದಲ್ಲಿ ಮುಸ್ಲಿಮ್ ಮತಗಳನ್ನು ಧ್ರುವೀಕರಿಸಲು ಯತ್ನಿಸಿದ್ದ ಆರ್‌ಜೆಡಿ ಯತ್ನವನ್ನು ವಿಫಲಗೊಳಿಸಿದ್ದರು.
ಎನ್‌ಡಿಎಗೆ ಬಲ ತುಂಬಿದ ಮಹಿಳಾ ಮತದಾರರು!
ಬಿಹಾರದಲ್ಲಿ ಈ ಸಲ ದಾಖಲೆಯ ಸಂಖ್ಯೆಯಲ್ಲಿ ಮಹಿಳೆಯರು ಸದ್ದಿಲ್ಲದೆ ಮತ ಚಲಾಯಿಸಿದ್ದಾರೆ! ರಾಜ್ಯದ 38 ಜಿಲ್ಲೆಗಳ ಪೈಕಿ 23ರಲ್ಲಿಪುರುಷರಿಗಿಂತಲೂ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿತ್ತು. 2 ಮತ್ತು ಮೂರನೇ ಹಂತದ ಮತದಾನದಲ್ಲಿಮಹಿಳೆಯರು ಗಮನಾರ್ಹ ಸಂಖ್ಯೆಯಲ್ಲಿಭಾಗವಹಿಸಿದ್ದರು. ಚುನಾವಣಾ ಆಯೋಗದ ಪ್ರಕಾರ ಒಟ್ಟಾರೆ ರಾಜ್ಯದಲ್ಲಿಮಹಿಳೆಯರು ದಾಖಲೆಯ ಶೇ.59.7ರಷ್ಟು ಮತ ಚಲಾಯಿಸಿದ್ದರೆ, ಪುರುಷರು ಶೇ.57.05ರೊಂದಿಗೆ ಹಿಂದುಳಿದಿದ್ದಾರೆ. ಜೆಡಿಯು ವರಿಷ್ಠ ನಿತೀಶ್ ಕುಮಾರ್ ಅವರಿಗೆ ಮಹಿಳಾ ಮತದಾರರು ಬೆಂಬಲಿಸಿದ್ದಾರೆ. ನವೆಂಬರ್ 5ರಂದು ಕೊನೆಯ ಸಾರ್ವಜನಿಕ ರಾರಯಲಿಯಲ್ಲಿನಿತೀಶ್ ಕುಮಾರ್ ಕೂಡ ವನಿತೆಯರ ಬೆಂಬಲವನ್ನು ಸ್ಮರಿಸಿಕೊಂಡಿದ್ದರು. ಇದನ್ನು ಸ್ವತಃ ಪ್ರಧಾನಿಯವರು ಟ್ವೀಟ್ ಮೂಲಕ ಪ್ರಸ್ತಾಪಿಸಿ, ಆತ್ಮನಿರ್ಭರ್ ಭಾರತಕ್ಕೆ ಮಹಿಳೆಯರು ಬಲ ತುಂಬಿದ್ದಾರೆ ಎಂದು ಹೇಳಿದ್ದರು.
ಮಹಿಳೆಯರ ಬೆಂಬಲ ಏಕೆ?
2005ರಲ್ಲಿ ಮೊದಲ ಸಲ ಮುಖ್ಯಮಂತ್ರಿಯಾದಾಗಿನಿಂದಲೂ ನಿತೀಶ್ ಕುಮಾರ್ ಅವರು ಮಹಿಳೆಯರ ಭದ್ರತೆ, ಸುರಕ್ಷತೆ, ಜೀವನೋಪಾಯಕ್ಕೆ ಸಂಬಂಧಿಸಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಅವರ ಬಡತನ ನಿರ್ಮೂಲನೆಗೆ 'ಜೀವಿಕಾ' ಎಂಬ ಯೋಜನೆ ತಂದಿದ್ದರು. ವಿಶ್ವ ಬ್ಯಾಂಕ್ ಪ್ರಾಯೋಜಿತವಾಗಿದ್ದ ಈ ಯೋಜನೆಯಡಿ ಕನಿಷ್ಠ 10 ಲಕ್ಷ ಸ್ವ ಸಹಾಯ ಸಂಘಗಳನ್ನು ಸ್ಥಾಪಿಸಲಾಗಿತ್ತು. ಪಂಚಾಯತಿ ಚುನಾವಣೆಗಳಲ್ಲಿಮಹಿಳೆಯರಿಗೆ ಶೇ.50 ಮೀಸಲು, ಶಾಲಾ ಬಾಲಕಿಯರಿಗೆ ಉಚಿತ ಸೈಕಲ್, 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್, ಎಲ್ಲಹಂತಗಳ ಸರಕಾರಿ ಹುದ್ದೆಗಳಲ್ಲಿವನಿತೆಯರಿಗೆ ಶೇ.35 ಮೀಸಲು ಇತ್ಯಾದಿ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರು. ಪೊಲೀಸ್ ಇಲಾಖೆಯ ಹುದ್ದೆಗಳಲ್ಲೂಮಹಿಳೆಯರಿಗೆ 35 ಪರ್ಸೆಂಟ್ ಮೀಸಲು ಕಲ್ಪಿಸಿದ್ದರು. ಬಿಹಾರದ 7.2 ಮತದಾರರಲ್ಲಿ3.4 ಮಂದಿ ಮಹಿಳೆಯರಿದ್ದಾರೆ
ನೇರ ನಗದು ವರ್ಗಾವಣೆ ಯೋಜನೆಗಳ ಎಫೆಕ್ಟ್
ಕೇಂದ್ರದ ಮೋದಿ ಸರಕಾರ ಮತ್ತು ರಾಜ್ಯದ ನಿತೀಶ್ ಸರಕಾರ ಜಾರಿಗೊಳಿಸಿದ್ದ ನಾನಾ ನೇರ ನಗದು ವರ್ಗಾವಣೆ ಯೋಜನೆಗಳು (ಡಿಬಿಟಿ) ಈ ಸಲ ಚುನಾವಣೆಯಲ್ಲಿಗೇಮ್ ಚೇಂಜರ್ ಆಗಿ ಪರಿಣಮಿಸಿದೆ. ಮಾರ್ಚ-ಏಪ್ರಿಲ್‌ನಲ್ಲಿಕೋವಿಡ್ ಬಿಕ್ಕಟ್ಟು ಕಾಡಿದ ಸಂದರ್ಭ ಉಭಯ ಸರಕಾರಗಳು ನೇರ ನಗದು ಮೂಲಕ ವಿತರಣೆ ಮೂಲಕ ನೆರವಾಗಿದ್ದವು. ಮಹಿಳೆಯರ ಖಾತೆಗೆ 30,000 ಕೋಟಿ ರೂ. ನಗದನ್ನು ವಿತರಿಸಲಾಗಿತ್ತು. ಎಲ್ಪಿಜಿ ಸಂಪರ್ಕಕ್ಕೆ ಸಂಬಂಧಿಸಿ 5,000 ಕೋಟಿ ರೂ. ವಿತರಣೆಯಾಗುತ್ತು. ಮೂರು ತಿಂಗಳ ಕಾಲ ಮಹಿಳೆಯರಿಗೆ ಮಾಸಿಕ ತಲಾ 500 ರೂ. ನಿಡಲಾಗಿತ್ತು. ನರೇಗಾದಲ್ಲಿದಿನದ ವೇತನವನ್ನು 182 ರೂ.ಗಳಿಂದ 202 ರೂ.ಗೆ ಏರಿಸಲಾಗಿತ್ತು. ಬಡ ವಿಧವೆಯರಿಗೆ ಸಹಾಯ ಧನ, ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರಿಗೆ ಸಹಾಯ ಧನ ವಿತರಿಸಲಾಗಿತ್ತು. ಏಪ್ರಿಲ್ ಮೊದಲ ವಾರದಲ್ಲಿ ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ 2,000 ರೂ.ಗಳನ್ನು ವಿತರಿಸಲಾಗಿತ್ತು.
ಬಿಹಾರ ಸರಕಾರ ಕೂಡ ಬಡ ಮತ್ತು ಅಗತ್ಯ ಇರುವವರಿಗೆ ಬ್ಯಾಂಕ್ ಖಾತೆಗೆ ನೇರವಾಗಿ ನಗದು ಜಮೆ ಮಾಡಿತ್ತು. ಕೋವಿಡ್-19 ವಿರುದ್ಧ ಹೋರಾಡುವ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂ. ವಿಮೆ ಕವರೇಜ್ ಒದಗಿಸಿತ್ತು. ಹೊರ ರಾಜ್ಯಗಳಲ್ಲಿಸಂಕಷ್ಟದಲ್ಲಿದ್ದ ಬಿಹಾರದ 6.7 ಲಕ್ಷ ವಲಸಿಗ ಕಾರ್ಮಿಕರಿಗೆ ತಲಾ 1000 ರೂ. ನಗದು ನೆರವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. ರೇಷನ್ ಕಾರ್ಡ್‌ದಾರರ ಬ್ಯಾಂಕ್ ಖಾತೆಗೆ 1,000 ರೂ. ನಗದನ್ನು ನೇರವಾಗಿ ಜಮೆ ಮಾಡಲಾಗಿತ್ತು. ಈ ರೀತಿ ತಂ್ರಜ್ಞಾನದ ನೆರವಿನಿಂದ, ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ, ಹಣ ಸೋರಿಕೆಯಿಲ್ಲದೆ ಶೇ.100ರಷ್ಟು ನಗದು ಫಲಾನುಭವಿಗಳಿಗೆ ತಲುಪಿತ್ತು. ಇದು ಎನ್‌ಡಿಎಗೆ ಸಕಾರಾತ್ಮಕವಾಗಿ ಪರಿಣಮಿಸಿದೆ.
ಬಿಜೆಪಿಯ ಒಟ್ಟಾರೆ ಸ್ಟ್ರೈಕ್ ರೇಟ್ ಶೇ.67ಕ್ಕೆ ಏರಿಕೆಯಾಗಿ, ಉಳಿದೆಲ್ಲಪ್ರಮುಖ ಪಕ್ಷಗಳನ್ನು ಹಿಂದಿಕ್ಕಿತ್ತು. 'ಜಂಗಲ್ ರಾಜ್'ನ ಬಗ್ಗೆ ಎಚ್ಚರಿಕೆ ಒಂದರಿಂದಲೇ ಗೆಲ್ಲಲು ಸಾಧ್ಯವಿಲ್ಲಎಂಬುದನ್ನು ಅರಿತಿದ್ದ ಎನ್‌ಡಿಎ, ಮೋದಿ ಬ್ರ್ಯಾಂಡ್ ರಾಜಕೀಯವನ್ನು ರಾಜಾರೋಷವಾಗಿ ಪ್ರದರ್ಶಿಸಿ ಮತ್ತೊಮ್ಮೆ ಯಶಸ್ವಿಯಾಯಿತು.
ಕೃಪೆ: ವಿಕ
PublicNext
12/11/2020 05:00 pm