ನವದೆಹಲಿ: ಭಾರತದ ರಾಜಕೀಯದಲ್ಲಿ ‘ಹವಾಮಾನಶಾಸ್ತ್ರಜ್ಞ’ ಅಥವಾ Meteorologist ಎಂದು ಕರೆಯಲ್ಪಡುವ ರಾಮ್ ವಿಲಾಸ್ ಪಾಸ್ವಾನ್ ಅವರ ರಾಜಕೀಯ ಪ್ರಯಾಣವು ಸುಮಾರು ಐದು ದಶಕಗಳಿಗಿಂತಲೂ ಹಳೆಯದು. ಅವರು ಪರಿಶಿಷ್ಟರು, ತುಳಿತಕ್ಕೆ ಒಳಗಾದವರ ಏಳಿಗೆಗೆ ನೀಡಿದ ಕೊಡುಗೆ ಅನನ್ಯ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಎರಡು ಬಾರಿ ಸಚಿವರಾಗಿದ್ದ ಪಾಸ್ವಾಲ್ ಅವರು, ಎರಡು ಬಾರಿಯೂ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದರು. ಅವರ ನಿಧನದ ಸುದ್ದಿ ತಿಳಿದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಮ್ ವಿಲಾಸ್ ಪಾಸ್ವಾನ್ ಅವರು ಬಿಹಾರದ ಖಗೇರಿಯಾ ಎಂಬಲ್ಲಿ 1946ರ ಜುಲೈ 5ರಂದು ಪಾಸ್ವಾನ್ ಜನಿಸಿದರು. 1969ರಲ್ಲಿ ಅವರು ಸಕ್ರಿಯ ರಾಜಕಾರಣ ಪ್ರವೇಶಿಸಿದರು. ಅದಕ್ಕೂ ಮುನ್ನ ಅವರು ಸರ್ಕಾರಿ ಸೇವೆಯಲ್ಲಿದ್ದರು. ಸಂಯುಕ್ತ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ, ಮೊದಲ ಬಾರಿಗೆ ಶಾಸಕರಾದರು. 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ನಡೆದ ಹೋರಾಟದಲ್ಲಿಯೂ ಪಾಲ್ಗೊಂಡಿದ್ದ ಪಾಸ್ವಾನ್ ಅವರು, ತುರ್ತು ಪರಿಸ್ಥಿತಿ ಅವಧಿಯಲ್ಲಿ ಜೈಲು ವಾಸ ಅನುಭವಿಸಿದ್ದರು.
1977ರಲ್ಲಿ ಹಾಜಿಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಂಸತ್ ಪ್ರವೇಶಿಸಿದರು. ಬಳಿಕ ಸತತವಾಗಿ ಅದೇ ಕ್ಷೇತ್ರದಿಂದ 8 ಬಾರಿ ಗೆಲುವು ಸಾಧಿಸಿದರು. ಹಲವು ಬಾರಿ ಅತ್ಯಧಿಕ ಮತಗಳ ಅಂತರದಿಂದ ಗೆದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರೂ, ತಾವೊಬ್ಬ ಸಮಾಜವಾದಿ, ಜಾತ್ಯತೀತತೆಗೆ ಬದ್ಧ ಎಂಬುದನ್ನು ನಿರೂಪಿಸುತ್ತಿದ್ದರು.
PublicNext
09/10/2020 09:04 am