ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಎರಡು ಸಿಂಹಗಳ ನಡುವೆ ಕಾದಾಟವಾಗಿದೆ. ಘಟನೆಯಲ್ಲಿ ಸಿಂಹಿಣಿಯೊಂದು ಮೃತಪಟ್ಟಿದೆ. ಕಾದಾಟದಲ್ಲಿ ತೀವ್ರ ಗಾಯಗೊಂಡಿದ್ದ ಮಾನ್ಯಾ(11) ಎಂಬ ಸಿಂಹಿಣಿ ಸಾವನ್ನಪ್ಪಿದೆ. ಸೋಮವಾರ ಮಾನ್ಯಾ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ವಾರದ ಹಿಂದೆ ಕಾದಾಡಿಕೊಂಡಿದ್ದ ಸಿಂಹಿಣಿ
ಸಿಂಹಧಾಮದ ಯಶವಂತ ಎಂಬ ಸಿಂಹದ ಜೊತೆಗೆ ಮಾನ್ಯಾ ಕಾದಾಟ ನಡೆಸಿತ್ತು. ಒಂದು ವಾರದ ಹಿಂದೆ ಇವೆರಡು ಸಿಂಹಗಳ ನಡುವೆ ಕಾದಾಟವಾಗಿತ್ತು. ‘ಕಾದಾಟದ ಹಿನ್ನೆಲೆಯಲ್ಲಿ ಎರಡು ಸಿಂಹಗಳನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು. ಆದರೆ ತೀವ್ರ ಗಾಯಗೊಂಡಿದ್ದ ಮಾನ್ಯಾ ಸಾವನ್ನಪ್ಪಿದೆ’ ಎಂದು ಹುಲಿ ಮತ್ತು ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದ ಚಂದ್ರ ತಿಳಿಸಿದ್ದಾರೆ. ಸಿಂಹಿಣಿ ಮಾನ್ಯಾಳನ್ನು 2011ರಲ್ಲಿ ತ್ಯಾವರೆಕೊಪ್ಪದ ಸಿಂಹಧಾಮಕ್ಕೆ ತರಲಾಗಿತ್ತು. ಮೈಸೂರು ಮೃಗಾಲಯದಿಂದ ಆರ್ಯ, ಮಾಲಿನಿ ಮತ್ತು ಮಾನ್ಯಾ ಸಿಂಹಗಳು ಇಲ್ಲಿಗೆ ಬಂದಿದ್ದವು. ಹಾಗಾಗಿ ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಮೂರು ಗಂಡು, ಮೂರು ಹೆಣ್ಣು ಸಿಂಹಗಳು ಇದ್ದವು. ಈಗ ಮಾನ್ಯಾ ಸಾವನ್ನಪ್ಪಿರುವುದರಿಂದ ಮೃಗಾಲಯದಲ್ಲಿ ಸಿಂಹಗಳ ಸಂಖ್ಯೆ ಐದಕ್ಕೆ ಕುಸಿದಿದೆ.
PublicNext
01/02/2022 05:54 pm