ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪ್ರವಾಹ ಭೀತಿ ಮುಂದುವರೆದಿದ್ದು, ಇದುವರೆಗೆ 1,033 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಕಳೆದೊಂದು ದಶಕದಲ್ಲಿಯೇ ದೇಶ ಕಂಡರಿಯದಷ್ಟು ಪ್ರವಾಹ ಸ್ಥಿತಿ ಉಂಟಾಗಿದೆ. ಪ್ರವಾಹದಲ್ಲಿ 1,517 ಜನರು ಗಾಯಗೊಂಡಿದ್ದರೆ. ಲಕ್ಷಾಂತರ ಜನರು ನಿರ್ಗತಿಕರಾಗಿರುವುದಾಗಿ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 119 ಮಂದಿ ದೇಶದ ವಿವಿಧೆಡೆ ಅಸುನೀಗಿದ್ದಾರೆ. 71 ಮಂದಿ ಗಾಯಗೊಂಡಿದ್ದಾರೆ.
ಇದಾಗಲೇ ದೇಶದಲ್ಲಿ ಆಗಸ್ಟ್ 30 ರವರೆಗೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಬಲೂಚಿಸ್ತಾನದಲ್ಲಿ ನಾಲ್ವರು, ಗಿಲ್ಗಿಟ್ ಬಾಲ್ಟಿಸ್ತಾನ್‌ನಲ್ಲಿ 6, ಖೈಬರ್ ಪಖ್ತುಂಖ್ವಾದಲ್ಲಿ 31 ಮತ್ತು ಸಿಂಧ್‌ನಲ್ಲಿ 76 ಮಂದಿ ಕಳೆದ 24 ಗಂಟೆಯಲ್ಲಿ ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸುಮಾರು 7.20 ಲಕ್ಷ ಜಾನುವಾರುಗಳು ಪ್ರವಾಹ ಆಹುತಿಯಾಗಿವೆ.
ವರುಣದ ರೌದ್ರ ನರ್ತನಕ್ಕೆ ಕನಿಷ್ಠ 110 ಜಿಲ್ಲೆಗಳು ಅಪಾಯದ ಅಂಚಿನಲ್ಲಿವೆ. ಬಲೂಚಿಸ್ತಾನ್, ಸಿಂಧ್ ಮತ್ತು ಪಂಜಾಬ್‌ನ ಹಲವು ಭಾಗಗಳು ಭಾರಿ ಪ್ರವಾಹಕ್ಕೀಡಾಗಿವೆ. ಪಾಕಿಸ್ತಾನಾದ್ಯಂತ ಇಲ್ಲಿಯವರೆಗೆ 3,451 ಕಿಮೀ ರಸ್ತೆ ಕೊಚ್ಚಿ ಹೋಗಿದ್ದರೆ, 149 ಸೇತುವೆಗಳು ಕುಸಿದು ಬಿದ್ದಿವೆ. 170 ವಾಣಿಜ್ಯ ಅಂಗಡಿಗಳು, 949,858 ಮನೆಗಳು ಭಾಗಶಃ ಅಥವಾ ಸಂಪೂರ್ಣವಾಗಿ ನಾಶವಾಗಿವೆ.
ಈ ಕುರಿತು ಅಂಕಿ ಅಂಶ ನೀಡಿರುವ ಪಾಕ್ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿ ಸದ್ಯ 72 ಜಿಲ್ಲೆಗಳು ತೀವ್ರ ವಿಪತ್ತಿಗೆ ಒಳಗಾಗಿವೆ. ಪ್ರವಾಹದಲ್ಲಿ ಸಿಲುಕಿದ 51,275 ಮಂದಿಯನ್ನು ರಕ್ಷಿಸಲಾಗಿದೆ. 498,442 ಮಂದಿಯನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದೆ. ಈ ವರ್ಷ ಒಂದರಲ್ಲಿಯೇ 388.7 ಮಿಮೀ ಮಳೆ ಸುರಿದಿದೆ. ಇದು ಸರಾಸರಿಗಿಂತ 190.07% ಅಂದರೆ 2.87 ಪಟ್ಟು ಹೆಚ್ಚಾಗಿದೆ ಎಂದು ಅದು ತಿಳಿಸಿದೆ.
PublicNext
28/08/2022 04:24 pm