ದಾವಣಗೆರೆ: ಆಕಸ್ಮಿವಾಗಿ ಸಾವನ್ನಪ್ಪಿದ 'ದೇವರ ಹಸು'ವಿಗೆ ಇಡೀ ಗ್ರಾಮದ ಜನರೇ ಕಣ್ಣೀರಿನ ವಿದಾಯ ನೀಡಿದ್ದಾರೆ. ವಿಧಿ ವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನಡೆಸಿದ ಘಟನೆ ತಾಲೂಕಿನ ಮಳಲಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಶೀಪುರದಲ್ಲಿ ನಡೆದಿದೆ.
ಅತ್ಯಂತ ಸೌಮ್ಯ ಸ್ವಭಾವದ ದೇವರ ಹಸು ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಸಾವು ಕಂಡಿತು. ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರೆಲ್ಲರೂ ಸೇರಿ ಇಡೀ ರಾತ್ರಿ ಭಜನೆ ನಡೆಸಿದರು. ಬುಧವಾರ ಬೆಳಿಗ್ಗೆ 8.30 ರಿಂದ ಮಧ್ನಾಹ್ನ 2 ರವರೆಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಟ್ಯಾಕ್ಟರ್‌ನಲ್ಲಿ ಮೆರವಣಿಗೆ ನಡೆಸಿ ನಂತರ ವಿಧಿ ವಿಧಾನಗಳ ಪ್ರಕಾರ ಗ್ರಾಮದ ಶ್ರೀ ಕಾಶೀಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಅಂತಿಮ ಸಂಸ್ಕಾರ ನಡೆಸಿದರು.
ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಅಂತಿಮ ವಿಧಿ ವಿಧಾನ ನೆರವೇರಿಸಿದರು. 15 ವರ್ಷದ ಈ ಹಸು ಇದುವರೆಗೂ 12 ಕರುಗಳನ್ನು ಹಾಕಿತ್ತು. ಅದರ ಕರುಗಳು ಹಸುವಾಗಿ ಅವು ಕೂಡ ಕರುಗಳನ್ನು ಹಾಕಿ ಹೀಗೆ ಗ್ರಾಮದ ದೇವಸ್ಥಾನಕ್ಕೆ 10 ರಿಂದ 13 ಲಕ್ಷ ರೂ ದೇಣಿಗೆ ಬರುವಂತೆ ಮಾಡಿದ್ದವು. ದೇವರ ಹಸುವಿನ ಸಾವಿನಿಂದ ಕಾಶೀಪುರ ಗ್ರಾಮ ಶೋಕದ ಮಡುವಿನಲ್ಲಿತ್ತು.
ಆಗಸ್ಟ್ 3 ರಂದು ಸಮಾರಾಧನೆ ಮತ್ತು ಅನ್ನ ಸಂತರ್ಪಣೆ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಈಗಾಗಲೇ ನಿರ್ಮಾಣವಾಗುತ್ತಿರುವ ಕಾಶೀಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿಯೇ ಕಲ್ಲಿನ ಹಸುವಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜೆಗೆ ವ್ಯವಸ್ಥೆ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
PublicNext
27/07/2022 07:52 pm