ದಾವಣಗೆರೆ: ಮಲೆನಾಡಿನಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ತುಂಗಾ ಹಾಗೂ ಭದ್ರಾ ನದಿಗೆ ನೀರು ಹೆಚ್ಚಾಗಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ತುಂಗಾಭದ್ರಾ ನದಿ ಉಕ್ಕಿ ಹರಿಯಲಾರಂಭಿಸಿದೆ. ನ್ಯಾಮತಿ, ಹೊನ್ನಾಳಿ ಹಾಗೂ ಹರಿಹರದಲ್ಲಿ ಅಪಾಯದ ಮಟ್ಟ ತಲುಪಿದ್ದು, ಜನರ ಆತಂಕ ಕ್ಷಣಕ್ಷಣಕ್ಕೂ ಜಾಸ್ತಿಯಾಗುತ್ತಿದೆ. ಈಗಾಗಲೇ ಹೊನ್ನಾಳಿ ಹಾಗೂ ಹರಿಹರ ಪಟ್ಟಣದಲ್ಲಿ ನೂರಾರು ಕುಟುಂಬಗಳನ್ನು ಸ್ಥಳಾಂತರ ಮಾಡಿದ್ದು, ಕಾಳಜಿ ಕೇಂದ್ರದಲ್ಲಿ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ.
ಮಲೆನಾಡು ಭಾಗದಲ್ಲಿ ಕಳೆದ 10 ದಿನಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿದೆ. ಇದರಿಂದಾಗಿ ಹರಿಹರದ ತುಂಗಭದ್ರಾ ನೀರಿನ ಮಟ್ಟ ಹೊತ್ತು ಕಳೆದಂತೆ ಏರುತ್ತಲೇ ಇದೆ. ಹರಿಹರದ ಗಂಗಾ ನಗರದ ಮನೆಗಳು ಜಲಾವೃತವಾಗಿದ್ದು, ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ.15ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ಮನೆಯಲ್ಲೇ ವಸ್ತುಗಳನ್ನು ಬಿಟ್ಟು ಜನರು ಹೊರ ಬಂದಿದ್ದಾರೆ. ಇನ್ನು, ಹೊನ್ನಾಳಿಯಲ್ಲಿ 102 ಮಂದಿಯನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಪ್ರತಿ ಬಾರಿ ಮಳೆ ಬಂದು ತುಂಗಭದ್ರಾ ನೀರು ಹೆಚ್ಚಾದಾಗಲ್ಲೆಲ್ಲಾ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಗಂಗಾ ನಗರದಲ್ಲಿ
ಕಳೆದ 20 ವರ್ಷಗಳಿಂದ ವಾಸವಿರುವ ಜನರ ಗೋಳು ಮುಂದುವರಿದಿದೆ. ಸರ್ಕಾರ ಮನೆ ಕಟ್ಟಿ ಕೊಡುವುದು ಬೇಡ, ಜಾಗನಾದ್ರೂ ಕೊಟ್ರೆ ನಾವೇ ಮನೆ ಕಟ್ಟಿಕೊಳ್ಳುತ್ತೆವೆ ಎಂದು ನಿವಾಸಿಗಳು ಹೇಳುತ್ತಿದ್ದಾರೆ. ಈಗಾಗಲೇ ತಾಲ್ಲೂಕು ಆಡಳಿತದಿಂದ ಮನೆ ಮುಳುಗಡೆಯಾದ ಕುಟುಂಬಗಳ ಸ್ಥಳಾಂತರ ಕಾರ್ಯ ನಡೆದಿದೆ. ಹರಿಹರ ಪಟ್ಟಣದ ಎಪಿಎಂಸಿಯ ಗೋದಾಮಿಗೆ ಸ್ಥಳಾಂತರಿಸಿ ಊಟ, ವಸತಿ ಸೌಲಭ್ಯ ನೀಡಲಾಗಿದೆ. ಸ್ಥಳದಲ್ಲೇ ನಗರಸಭೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.
ಈಗಾಗಲೇ ಮನೆ ಮುಳುಗಡೆಯಾದವರನ್ನು ಸ್ಥಳಾಂತರ ಮಾಡಿದ್ದೇವೆ. ನೀರಿನ ಮಟ್ಟ ಹೆಚ್ಚಾಗುತ್ತಿದೆ. ಇನ್ನೂ ಕೆಲ ಮನೆಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಹಾಗಾಗಿ ಎಲ್ಲರನ್ನೂ ಸ್ಥಳಾಂತರ ಮಾಡುತ್ತೇವೆ. ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದೇವೆ.ಶೀಘ್ರದಲ್ಲೇ ಮನೆ ನೀಡುವ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎಂದು ಹರಿಹರ ನಗರಸಭೆ ಆಯುಕ್ತ ಬಸವರಾಜ್ ತಿಳಿಸಿದ್ದಾರೆ.
PublicNext
17/07/2022 03:37 pm