ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯ ಹಲಸೂರು ವಾರ್ಡ್ ವ್ಯಾಪ್ತಿಯ ಮಿಲ್ಕ್ ಮ್ಯಾನ್ ಸ್ಟ್ರೀಟ್ ನಲ್ಲಿ ಇಂದು ಮುಂಜಾನೆ 6 ಗಂಟೆ ಸುಮಾರಿಗೆ 58 ವರ್ಷಗಳ ಹಳೆಯ ಕಟ್ಟಡ ಕುಸಿದು ಬಿದ್ದಿದೆ.ಸ್ಥಳಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೆಲ ಮತ್ತು ಮೊದಲ ಮಹಡಿಯನ್ನೊಳಗೊಂಡ ಸುಮಾರು 20 ಚದರಡಿಯ ಕಟ್ಟಡ ಕುಸಿದಿದ್ದು, ಈ ಕಟ್ಟಡವನ್ನು ಮಣ್ಣು- ಇಟ್ಟಿಗೆಯಿಂದ ನಿರ್ಮಿಸಲಾಗಿತ್ತು. ಶಿಥಿಲಗೊಂಡಿದ್ದ ಕಟ್ಟಡಕ್ಕೆ ಪಾಲಿಕೆ ನೋಟಿಸ್ ನೀಡಿ ಮಾಲೀಕರಿಗೆ ಮುಂಚಿತವಾಗಿ ಎಚ್ಚರಿಕೆ ನೀಡಲಾಗಿತ್ತು. ಕಟ್ಟಡ ಕುಸಿತ ವೇಳೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ಪ್ರಸ್ತುತ ಭಗ್ನಾವಶೇಷಗಳ(ಕಟ್ಟಡ ತ್ಯಾಜ್ಯ) ತೆರವಿಗೆ ಕ್ರಮ ಕೈಗೊಳ್ಳಲಾಗಿದೆ.
ಇದೇ ಸ್ಥಳದಲ್ಲಿ ಇನ್ನೆರಡು ಕಟ್ಟಡಗಳು ಶಿಥಿಲಗೊಂಡಿದ್ದು, ಅವನ್ನು ಕೂಡ ಇಂದು ನೆಲಸಮಗೊಳಿಸಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.ಇನ್ನು ಹೆಣ್ಣೂರು ಕ್ರಾಸ್, ಗೊರಗುಂಟೆ ಪಾಳ್ಯ ಸಿಗ್ನಲ್ ನಲ್ಲಿ ಮಳೆಯಿಂದಾಗಿ ರಸ್ತೆ ಸಂಪೂರ್ಣ ಜಲಾವೃತಗೊಂಡು, ಕೆಲ ಗಂಟೆ ಸಂಚಾರ ದಟ್ಟಣೆ ಉಂಟಾಯಿತು.
PublicNext
19/11/2021 12:44 pm