ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ: ಭಾರೀ ಮಳೆಗೆ ಭಟ್ಕಳ ನಗರ ಸಂಪೂರ್ಣ ಜಲಾವೃತ, ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ

ರಾಜ್ಯದ ಕರಾವಳಿಯಲ್ಲಿ ಮತ್ತೆ ವರುಣನ ಆರ್ಭಟ ಜೋರಾಗಿದೆ. ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಸೋಮವಾರ ರಾತ್ರಿಯಿಂದ ಆರಂಭವಾದ ಮಳೆ ಈವರೆಗೂ ಬಿಡುವು ನೀಡಿಲ್ಲ. ಇದರಿಂದಾಗಿ ಮತ್ತೆ ಅನೇಕ ಗ್ರಾಮಗಳಿಗೆ ಮುಳುಗಡೆಯ ಭೀತಿ ಎದುರಾಗಿದೆ ಭಟ್ಕಳ ಪಟ್ಟಣ ಇತಿಹಾಸದಲ್ಲೇ ಮೊದಲ ಬಾರಿಗೆ ಕಂಡು ಕೇಳರಿಯದಂಥ ಪ್ರವಾಹ ಪರಿಸ್ಥಿತಿಗೆ ತುತ್ತಾಗಿದೆ. ರಾತ್ರಿಯಿಂದ ಬೆಳಗ್ಗಿನವರೆಗೆ ಸುರಿದ ಮಳೆಗೆ ನಿರೀಕ್ಷೆಯೇ ಇರದಷ್ಟು ನೀರು ತುಂಬಿ ಪಟ್ಟಣ ಭಾಗದಲ್ಲೇ ಹತ್ತಾರು ಗ್ರಾಮಗಳು ಜಲಾವೃತವಾಗಿವೆ. ಭಾರೀ ಮಳೆಗೆ ನಗರ ಭಾಗದಲ್ಲಿ ನೀರು ತುಂಬಲಾರಂಭಿಸಿದೆ. ಇದರಿಂದಾಗಿ ಜನ ಕಂಗಾಲಾಗಿದ್ದಾರೆ. ಹಲವು ಮನೆಗಳಿಗೆ ನೀರು ನುಗ್ಗಿದೆ.

ಭಟ್ಕಳ ನಗರದಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ನಗರದ ವೆಂಕಟಾಪುರ, ಚೌಥ್ನಿ, ಶರಾಬಿ ಹೊಳೆಗಳು ತುಂಬಿ ಹರಿದ ಪರಿಣಾಮ ಪಟ್ಟಣ ಭಾಗದ ಕೋಕ್ತಿ, ಆಸರಕೇರಿ, ಮೂಡಭಟ್ಕಳ, ಮುಟ್ಟಳ್ಳಿ, ಚೌಥ್ನಿ, ಮುಂಡಳ್ಳಿ ಭಾಗ ಸಂಪೂರ್ಣ ಜಲಾವೃತವಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಶಂಸುದ್ದೀನ್ ಸರ್ಕಲ್, ರಂಗಿನಕಟ್ಟೆ, ಶಿರಾಲಿಯಲ್ಲಿ ಸೊಂಟದ ಮಟ್ಟ ನೀರು ನಿಂತು ವಾಹನಗಳು ಓಡಾಡದ ಪರಿಸ್ಥಿತಿ ಎದುರಾಗಿದೆ. ಭಟ್ಕಳದ ಶಂಸುದ್ದೀನ್ ವೃತ್ತದಿಂದ ಪೇಟೆಯ ಹೂವಿನ ಚೌಕದವರೆಗೆ ಭಾರೀ ನೀರು ನಿಂತಿದ್ದು, ಸಣ್ಣಪುಟ್ಟ ವಾಹನಗಳು ಕೂಡ ತೇಲಿ ಹೋಗಿವೆ.

ಮುಂಜಾಗ್ರತಾ ಕ್ರಮವಾಗಿ ಭಟ್ಕಳದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ನೆರೆ ಉಂಟಾಗುವ ತಾಲೂಕು ಅಲ್ಲದಿದ್ದರೂ ಸಹ ಭಟ್ಕಳ ಇತಿಹಾಸದಲ್ಲಿ ಕಂಡು ಕೇಳರಿಯದ ಪ್ರವಾಹ ಪರಿಸ್ಥಿತಿಗೆ ಈ ಬಾರಿ ತುತ್ತಾದಂತಾಗಿದೆ. ಆಗಸ್ಟ್ 6ರವರೆಗೂ ಭಾರೀ ಮಳೆಯ ಮುನ್ಸೂಚನೆ ಕಾರಣ ಈಗಾಗಲೇ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಜನತೆ ಎಚ್ಚರ ವಹಿಸಬೇಕಿದೆ.

Edited By :
PublicNext

PublicNext

02/08/2022 01:46 pm

Cinque Terre

45.98 K

Cinque Terre

0

ಸಂಬಂಧಿತ ಸುದ್ದಿ