ಕೊಪ್ಪಳ: ಸದ್ಯ ಟೊಮ್ಯಾಟೊಗೆ ಎಲ್ಲಿಲ್ಲದ ಬೆಲೆ ಬಂದಿದೆ. ಇದು ಗ್ರಾಹಕರಿಗೆ ನುಂಗಲಾಗದ ತುತ್ತಾಗಿಯೂ ಪರಿಣಮಿಸಿದೆ. ಆದರೆ ಮಾರುವವರು ಮತ್ತು ಕೊಳ್ಳುವವರಿಗೆ ಮಾತ್ರ ಬೆಲೆ ಏರಿಕೆ ಕಾಣುತ್ತಿದೆಯೇ ಹೊರತು ಟೊಮ್ಯಾಟೊ ಬೆಳೆದ ರೈತರ ಕೈ ಸೇರುತ್ತಿರುವುದು ಮಾತ್ರ ಪುಡಿಗಾಸು.
ಕೊಪ್ಪಳ ಜಿಲ್ಲೆಯಲ್ಲಿಯೂ ಟೊಮ್ಯಾಟೊ ಕೆಜಿಗೆ 90 ರೂ. ಮಾರಾಟವಾಗುತ್ತಿದ್ದು, ರೈತರಿಗೆ ಮಾತ್ರ ಪುಡಿಗಾಸು ಸಿಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಟೊಮ್ಯಾಟೊ ಬೆಲೆ ಗ್ರಾಹಕರಿಗೆ ಹೊರೆಯಾಗಿದ್ದು, ಬಹುತೇಕ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ. ಕೊಪ್ಪಳ ಜಿಲ್ಲಾದ್ಯಂತ ಸುರಿದ ಜಿಟಿಜಿಟಿ ಮಳೆಯಿಂದ ಟೊಮ್ಯಾಟೊ ಬೆಳೆ ಹಾನಿಗೆ ಒಳಗಾಗಿದೆ. ಇದರಿಂದ ಬೆಲೆ ಹೆಚ್ಚಾಗಿದೆ. ಕೆಲ ರೈತರು ಹರಸಾಹಸ ಮಾಡಿ, ಒಂದಷ್ಟು ಬೆಳೆ ಉಳಿಸಿ ಕೊಂಡು ಮಾರುಕಟ್ಟೆಗೆ ತರುತ್ತಿದ್ದಾರೆ.
ಆದ್ರೆ, ದಲ್ಲಾಳಿಗಳು ರೈತರಿಂದ ಖರೀದಿ ಮಾಡುವ ದರ ಮತ್ತು ವ್ಯಾಪಾರಿಗಳು ಗ್ರಾಹಕರಿಗೆ ಮಾರಾಟ ಮಾಡುವ ದರಕ್ಕೆ ಭಾರಿ ವ್ಯತ್ಯಾಸವಿದ್ದು ಇಲ್ಲಿ ಮಧ್ಯವರ್ತಿ ಗಳಿಗೆ ಲಾಭವಾಗುತ್ತಿದೆ.ಕೊಪ್ಪಳ ಜಿಲ್ಲೆಯ ಬಹುತೇಕ ಕಡೆ 25 ಕೆಜಿ ತೂಕದ ಟೊಮೆಟೊ ಬಾಕ್ಸ್ ಗರಿಷ್ಠ 1100 ರೂಪಾಯಿಗೆ ರೈತರಿಂದ ವ್ಯಾಪಾರಿಗಳು ಖರೀದಿಸುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಪ್ರತಿ ಕೆಜಿಗೆ 80 ರಿಂದ 90 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಸುಮಾರು 50 ರೂಪಾಯಿ ದರ ವ್ಯತ್ಯಾಸವಿದೆ.
ಇದರಿಂದಾಗಿ ರೈತನಿಗೂ ಲಾಭವಿಲ್ಲ, ಗ್ರಾಹಕರಿಗೂ ಹೊರೆಯಾದಂತಾಗಿದೆ. ರೈತರಿಗೆ ಮಳೆ ಒಂದು ರೀತಿ ಪೆಟ್ಟು ನೀಡಿದ್ರೆ, ದಲ್ಲಾಳಿಗಳು ಮತ್ತೊಂದು ರೀತಿ ಹೊಡೆತ ಕೊಡುತ್ತಿದ್ದಾರೆ
PublicNext
26/11/2021 04:21 pm