ಮೈಸೂರು :ಅನಾಥ ಶವಗಳ ಅಂತ್ಯಸಂಸ್ಕಾರದ ಮೂಲಕ ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಮೈಸೂರಿನ ಅಯೂಬ್ ಅಹ್ಮದ್ ಅವರಿಗೆ 2023ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ನೀಡುವ ಮೂಲಕ ಗೌರವಿಸಬೇಕು ಎಂದು ಸಂಸದ ಪ್ರತಾಪ ಸಿಂಹ ಹಾಗೂ ಶಾಸಕ ತನ್ವೀರ್ ಸೇಠ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ವಿನಂತಿಸಿದ್ದಾರೆ.
ಮೈಸೂರಿನ ಎನ್.ಆರ್.ಮೊಹಲ್ಲಾ ಎ.ಜೆ.ಬ್ಲಾಕ್ ನಿವಾಸಿಯಾಗಿರುವ ಅಯೂಬ್, ಕಳೆದ 23 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಮೆರಿಕದ ಹಾರ್ಮೊನಿ ಇನ್ಸ್ಟಿಟ್ಯೂಟ್ ಅಯೂಬ್ ಅವರಿಗೆ ಈಗಾಗಲೇ ಡಾಕ್ಟರೇಟ್ ನೀಡಿ ಗೌರವಿಸಿದೆ. ಎ.ಪಿ.ಜೆ.ಅಬ್ದುಲ್ ಕಲಾಂ ಗ್ಲೋಬಲ್ ಪೀಸ್ ಅವಾರ್ಡ್, 2017ರ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೂ ಅಯೂಬ್ ಅವರಿಗೆ ಲಭಿಸಿದೆ.
ಅವರು ಈವರೆಗೆ 16 ಸಾವಿರ ಅನಾಥ ಶವಗಳಿಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕೊರೊನಾ ಸಂದರ್ಭದಲ್ಲೂ ಅನಾಥ ಶವನಗಳ ಅಂತ್ಯಕ್ರಿಯೆ ಮಾಡುವ ತಮ್ಮ ಸೇವೆಯಿಂದ ಹಿಂದೆ ಸರಿಯಲಿಲ್ಲ. ಅನಾಥ ಶವ ಸಂಸ್ಕಾರದ ಜೊತೆಗೆ ಟೈಲರಿಂಗ್ ಸಂಸ್ಥೆ ತೆರೆದು ಬಡ ಜನತೆಗೆ ಉಚಿತ ಹೊಲಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ.
ಅಯೂಬ್ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಬೇಕೆಂದು ವಿನಂತಿಸಿ ಪ್ರತಾಪ್ ಸಿಂಹ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಅಯೂಬ್ ಅವರು ಕಳೆದ 20 ವರ್ಷಗಳಿಂದ ಭಿಕ್ಷುಕರಿಗೆ ಉಚಿತ ಆಹಾರ ನೀಡುವುದರ ಜೊತೆಗೆ ಜನಾಬ್ ಬಶೀರ್ ವೃದ್ಧಾಶ್ರಮದ ಮೂಲಕ ಬಡ ವೃದ್ಧರನ್ನು ಸಲಹುತ್ತಿದ್ದಾರೆ. ವೃತ್ತಿಯಲ್ಲಿ ಅವರು ಮಂಡಿ ಮೊಹಲ್ಲಾದಲ್ಲಿ ಲೋಡರ್ ಆಗಿದ್ದಾರೆ.
Kshetra Samachara
17/09/2022 03:41 pm